ಪೊಲೀಸ್ ಕೇಂದ್ರಗಳಲ್ಲಿ ಆರೆಸ್ಸೆಸ್ ಅಜೆಂಡಾ ಜಾರಿಗೆ ತರುವೆ: ಸವಾಲೆಸೆದ ಐಜಿ

ತಿರುವನಂತಪುರಂ,ಸೆ.7: ಪೊಲೀಸ್ ಕೇಂದ್ರಗಳಲ್ಲಿ ಆರೆಸ್ಸೆಸ್ ಅಜೆಂಡಾ ಜಾರಿಗೆ ತಂದೇ ತೀರುವೆ ಸಾಧ್ಯವಿದ್ದರೆ ತಡೆಯಿರಿ ಎಂದು ಪೊಲೀಸ್ ಕೇಂದ್ರ ಐಜಿ ಇತರ ಪೊಲೀಸ್ ಅಧಿಕಾರಿಗಳಿಗೆ ಸವಾಲೆಸದ ಘಟನೆ ಕೇರಳದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಪೊಲೀಸ್ ಕೇಂದ್ರದಲ್ಲಿ ಜಾರಿಗೆ ತರುವ ಸುಧಾರಣೆಗಳ ವಿರುದ್ಧ ಬಹಿರಂಗ ನಿಲುವು ತಳೆದಿರುವ ಅಧಿಕಾರಿಗಳನ್ನು ತನ್ನ ಕಚೇರಿಗೆ ಕರೆಯಿಸಿಕೊಂಡು ಐಜಿ ಸುರೇಶ್ ರಾಜ್ ಪುರೋಹಿತ್ ಸವಾಲುಹಾಕಿದ್ದಾರೆ. ಸೋಮವಾರ ಬೆಳಗ್ಗೆ ಜೂನಿಯರ್ ಸುಪರಿಂಟೆಂಡೆಂಟ್, ಸೀನಿಯರ್ ಸುಪರಿಂಟೆಂಡೆಂಟ್ ಮಟ್ಟದ ಅಧಿಕಾರಿಗಳನ್ನು ಐಜಿ ಕಚೇರಿಗೆ ಅವರು ಕರೆಯಿಸಿಕೊಂಡು ಈ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. ಅದೂಅಲ್ಲದೆ, ಪೊಲೀಸ್ ಕೇಂದ್ರದಲ್ಲಿ ಟ್ಯಾಗ್ ವಿವಾದಕ್ಕೆ ಸಂಬಂಧಿಸಿದ ಮಾಹಿತಿ ಮಾಧ್ಯಮಗಳಿಗೆ ಸೋರಿಕೆಮಾಡಿದ ಅಧಿಕಾರಿಗಳಿಗೆ ಬುದ್ಧಿಕಲಿಸುವೆ ಎಂದು ಕೂಡಾ ಐಜಿ ಸುರೇಶ್ ರಾಜ್ ಪುರೋಹಿತ್ ಬೆದರಿಸಿದ್ದಾರೆ.
ಸಂಘಪರಿವಾರ ಹಿತಾಸಕ್ತಿ ಪ್ರಕಾರ ಪುರೋಹಿತ್ ಸಿಐಗಳ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಐಜಿ ಅಧಿಕಾರಿಗಳನ್ನು ಕರೆಯಿಸಿಕೊಂಡು ಬೆದರಿಸಿದ್ದಾರೆ. ಅದೇ ವೇಳೆ ಪೊಲೀಸ್ ಕೇಂದ್ರದ ಟ್ಯಾಗ್ ವಿವಾದಗಳನ್ನು ಕೊನೆಗೊಳಿಸಬೇಕೆಂದು ಕೇರಳ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹ್ರಾ ಪರೋಹಿತ್‌ಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ಎನ್‌ಜಿಒ ಯೂನಿಯನ್ ಮುಖಾಂತರ ಸರಕಾರಕ್ಕೆ ಪುರೋಹಿತ್ ವಿರುದ್ಧ ದೂರು ನೀಡಲು ಪೊಲೀಸರು ನಿರ್ಧರಿಸಿದ್ದಾರೆ. ಐಜಿಯನ್ನು ಬದಲಾಯಿಸಬೇಕೆಂದು ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರಿಗೆ ದೂರು ನೀಡಲು ಸಿದ್ಧತೆ ನಡೆಸುತ್ತಿದ್ದಾರೆ. ಪೊಲೀಸ್ ಅಕಾಡಮಿಯ ಬೀಫ್ ವಿವಾದ ಮತ್ತು ಅಪ್ರಾಪ್ತ ವಯಸ್ಸಿನ ಪುತ್ರನಿಗೆ ಅಧಿಕೃತ ಪೊಲೀಸ್ ವಾಹನ ಚಲಾಯಿಸಲು ನೀಡಿದ ಕಾರಣಕ್ಕಾಗಿ ಪುರೋಹಿತ್‌ರನ್ನು ಪೊಲೀಸ್ ಕೇಂದ್ರಕ್ಕೆ ವರ್ಗಾಯಿಸಲಾಗಿತ್ತು ಎಂದು ವರದಿ ತಿಳಿಸಿದೆ.







