ಕುವೈಟ್: ವಿದೇಶಿ ಉದ್ಯೋಗಿಗಳ ಬ್ಯಾಂಕ್ ಖಾತೆ ಪರಿಶೀಲಿಸಲು ಸಂಸದನಿಂದ ಒತ್ತಾಯ

ಕುವೈಟ್ ಸಿಟಿ, ಸೆ.7: ದೇಶದಲ್ಲಿ ಕೆಲಸಮಾಡುತ್ತಿರುವ ವಿದೇಶಿಯರ ಬ್ಯಾಂಕ್ ಖಾತೆಗಳನ್ನು ಮತ್ತು ವೇತನವನ್ನು ಪರಿಶೀಲನೆ ನಡೆಸಬೇಕೆಂದು ಸಂಸದ ಅಬ್ದುರ್ರಹ್ಮಾನ್ ಅಲ್ ಜೀರಾನ್ ಹೇಳಿದ್ದಾರೆಂದು ವರದಿಯಾಗಿದೆ. ಸರಕಾರ ಅವರಿಗೆ ನೀಡುತ್ತಿರುವ ಸೇವೆಗಳಿಗೆ ಅವರು ಸರಿಯಾಗಿ ಫೀಸು ಪಾವತಿಸಿದ್ದಾರೆಯೇ ಎಂದು ದೃಢಪಡಿಸಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.
ವಿದೇಶಿಗಳಿಗೆ ನೀಡಲಾಗುವ ವಿವಿಧ ಸೇವೆಗಳಿಗೆ ಫೀಸು ಹಾಕುವುದರಲ್ಲಿ ಸರಕಾರದಿಂದ ಹೆಚ್ಚುಕಮ್ಮಿಯಾಗುತ್ತಿದೆ. ಪ್ರತಿಯೊಂದು ದೇಶದಲ್ಲಿಯೂ ಅಧಿಕೃತ ಕೆಲಸಗಳಿಗೆ ಸಂಬಂಧಿಸಿದಂತೆ ಸ್ವದೇಶಿ ಮತ್ತು ವಿದೇಶಿಗಳಿಗೆ ವಿಶೇಷ ಫೀಸು ವಿಧಿಸಲಾಗುತ್ತಿದೆ. ಆದರೆ ಸ್ವದೇಶಗಳಿಂದ ಮತ್ತು ವಿದೇಶಿಗಳಿಂದ ಸಂಗ್ರಹಿಸಲಾಗುವ ಫೀಸಿನ ಮೊತ್ತದಲ್ಲಿ ಸಹಜವಾದ ವ್ಯತ್ಯಾಸಗಳಿರುತ್ತವೆ. ಆದರೆ ಕುವೈಟ್‌ನಲ್ಲಿವಿದೇಶಿಗಳಿಗೆ ನೀಡುವ ಸೇವೆಗಳಿಗೆ ತುಂಬ ಕಡಿಮೆ ಫೀಸು ವಿಧಿಸಲಾಗುತ್ತಿದೆ. ಇದನ್ನು ಹೆಚ್ಚಿಸಬೇಕು ಎಂದು ಸ್ಥಳೀಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂಸದ ಹೇಳಿದ್ದಾರೆ. ಜೊತೆಗೆ ದೇಶದಲ್ಲಿರುವ ವಿದೇಶಿಯರ ಕೆಲಸ, ಸಂಬಳ ಮತ್ತು ಜೀವನಮಟ್ಟದ ಆಧಾರದಲ್ಲಿ ವಿಂಗಡಿಸಬೇಕು. ಹೀಗೆ ವಿಂಗಡಿಸಿದ ಬಳಿಕ ಸರಿಯಾದ ವಿದ್ಯಾಭ್ಯಾಸ ಇಲ್ಲದ ಮತ್ತು ಕಡಿಮೆ ಯೋಗ್ಯತೆ ಇರುವ ಕಾರಣದಿಂದ ಕಡಿಮೆ ಸಂಬಳ ಪಡೆಯುತ್ತಿರುವ ವಿದೇಶಿಯರಿಗೆ ವಿಶೇಷ ತರಬೇತಿ ಶಿಬಿರಗಳನ್ನು ಏರ್ಪಡಿಸಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮಯವನ್ನು ನಿಗದಿಪಡಿಸಿ ಇಂತಹ ತರಬೇತಿ ಶಿಬಿರಗಳನ್ನು ಏರ್ಪಡಿಸಬೇಕು. ಅದರಲ್ಲಿ ಯಶಸ್ವಿಯಾದವರನ್ನು ದೇಶದ ಉದ್ಯೋಗ ಮಾರುಕಟ್ಟೆಯಲ್ಲಿ ಮುಂದುವರಿಯಲು ಅನುಮತಿಸಬೇಕು. ತರಬೇತಿ ಕೋರ್ಸ್‌ನಲ್ಲಿ ಪರಾಜಯಹೊಂದುವವರಿಗೆ ಮತ್ತೊಂದು ಅವಕಾಶವನ್ನು ನೀಡಬೇಕು ಅದರಲ್ಲಿ ವಿಫಲರಾದವರನ್ನು ಊರಿಗೆ ಮರಳಿ ಕಳುಹಿಸಬೇಕು. ಕಡ್ಡಾಯ ತರಬೇತಿ ಕೋರ್ಸಿನಲ್ಲಿ ಯಶಸ್ವಿಯಾದವರಿಗೆ ವಿಶೇಷ ಫೀಸು ವಿಧಿಸಬೇಕೆಂದು ಸಂಸದ ಹೇಳಿದ್ದಾರೆ.
ಇದಕ್ಕಿಂತ ಎರಡು ದಿವಸ ಹಿಂದೆ ಇಂತಹದೇ ಒಂದು ಸಂದರ್ಶನದಲ್ಲಿ ಕುವೈಟ್‌ನಲ್ಲಿ ಎಂಟುಲಕ್ಷ ಭಾರತೀಯರು ಮತ್ತು ಐದು ಲಕ್ಷ ಅರಬ್ ವಂಶಸ್ಥರು ಮಾಧ್ಯಮಿಕ ಶಿಕ್ಷಣವನ್ನು ಪಡೆದಿಲ್ಲ. ಇವರನ್ನು ಇನ್ನುಕೂಡಾ ದೇಶದಲ್ಲಿ ಉಳಿಸಿಕೊಳ್ಳಬೇಕಿದೆಯೇ ಎಂದು ಪ್ರಶ್ನಿಸಿದ್ದರೆಂದು ವರದಿಯಾಗಿದೆ.





