ಸೆ. 11ರಂದು ಕಟೀಲು ಕ್ಷೇತ್ರಕ್ಕೆ ಪಾದಯಾತ್ರೆ
ಮಂಗಳೂರು, ಸೆ.7: ಕಟೀಲು ಕ್ಷೇತ್ರದ ದೇವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಸಂದೇಶಗಳನ್ನು ಬಿತ್ತರಿಸಿರುವ ಸಮಾಜ ಘಾತುಕರನ್ನು ಬಂಧಿಸಿ ಶಿಕ್ಷೆಗೊಳಪಡಿಸುವ ನಿಟ್ಟಿನಲ್ಲಿ ಸಾಮೂಹಿಕ ಪ್ರಾರ್ಥನೆಗಾಗಿ ಕಟೀಲು ಕ್ಷೇತ್ರಕ್ಕೆ ದೇವಿಯ ಭಕ್ತವೃಂದದಿಂದ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಟಿಯಲ್ಲಿಂದು ಈ ವಿಷಯ ತಿಳಿಸಿದ ಮಾಣಿಲ ಕ್ಷೇತ್ರದ ಮೋಹನದಾಸ ಸ್ವಾಮೀಜಿ, ಅಂದು ಬೆಳಗ್ಗೆ ಅಧಿಕೃತವಾಗಿ ಪೊಳಲಿ ಕ್ಷೇತ್ರದ ಬಳಿಯಿಂದ ಬೃಹತ್ ಪಾದಯಾತ್ರೆ ನಡೆಯಲಿದೆ ಎಂದರು.
ಬೆಳಗ್ಗೆ 6 ಗಂಟೆಗೆ ಬಿಸಿರೋಡ್‌ನ ಅನ್ನಪೂರ್ಣಶ್ವೇರಿ ದೇವಸ್ಥಾನದಿಂದಲೂ ಭಕ್ತರ ತಂಡವು ಪ್ರಾರ್ಥನೆಯೊಂದಿಗೆ ಪಾದಯಾತ್ರೆ ಆರಂಭಿಸಿ ಪೊಳಲಿ ಕ್ಷೇತ್ರದ ಮೂಲಕ ಕಟೀಲು ಕ್ಷೇತ್ರಕ್ಕೆ ತೆರಳಲಿದೆ. ದ.ಕ. ಜಿಲ್ಲೆಯಲ್ಲಿ ಕೋಮು ಭಾವನೆಯನ್ನು ಕೆದಕುವ ಪ್ರಯತ್ನದ ವಿರುದ್ಧವಾಗಿ ಶಾಂತಿಯುತ ಯಾವುದೇ ರೀತಿಯ ಘೋಷಣೆ, ವಿರೋಧಾಬಾಸ ಇಲ್ಲದೆ, ಜಾಗಟೆ, ಶಂಖ, ಭಜನೆಯೊಂದಿಗೆ ಈ ಪಾದಯಾತ್ರೆ ಕಟೀಲು ಕ್ಷೇತ್ರಕ್ಕೆ ತೆರಳಲಿದೆ. ಧರ್ಮ, ಜಾತಿಯ ಬೇಧವಿಲ್ಲದೆ ಈ ಪಾದಯಾತ್ರೆಯಲ್ಲಿ ಭಕ್ತರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಿಯ ಭಕ್ತವೃಂದದ ಗೌರವಾಧ್ಯಕ್ಷ ನಾಗರಾಜ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್ ಉಪಸ್ಥಿತರಿದ್ದರು.





