ಪ್ರಪ್ರಥಮ ಫೆಡರಲ್ ಮುಸ್ಲಿಮ್ ನ್ಯಾಯಾಧೀಶನನ್ನು ನೇಮಿಸಿದ ಒಬಾಮ

ವಾಶಿಂಗ್ಟನ್, ಸೆ. 7: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ರಾಜಧಾನಿಯಲ್ಲಿ ಮೊದಲ ಮುಸ್ಲಿಮ್ ಫೆಡರಲ್ ನ್ಯಾಯಾಧೀಶರನ್ನು ನೇಮಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ವಾಶಿಂಗ್ಟನ್‌ನ ಕಾನೂನು ಸಂಸ್ಥೆಯೊಂದರ ಪಾಲುದಾರನಾಗಿರುವ ಆಬಿದ್ ರಿಯಾಝ್ ಖುರೇಶಿ ಅವರನ್ನು ಕೊಲಂಬಿಯ ಜಿಲ್ಲೆಯ ಜಿಲ್ಲಾ ನ್ಯಾಯಾಲಯಕ್ಕೆ ನೇಮಕ ಮಾಡಲಾಗಿದೆ ಎಂದು ‘ಹಫಿಂಗ್ಟನ್ ಪೋಸ್ಟ್’ ಮಂಗಳವಾರ ವರದಿ ಮಾಡಿದೆ.
‘‘ಅಮೆರಿಕದ ಜಿಲ್ಲಾ ನ್ಯಾಯಾಲಯದ ಪೀಠಕ್ಕೆ ಕುರೇಶಿ ಅವರನ್ನು ನೇಮಿಸಲು ಸಂತೋಷವಾಗುತ್ತಿದೆ’’ ಎಂದು ಹೇಳಿಕೆಯೊಂದರಲ್ಲಿ ಒಬಾಮ ಹೇಳಿದ್ದಾರೆ. ‘‘ಅವರು ಪ್ರಾಮಾಣಿಕತೆ ಮತ್ತು ನ್ಯಾಯಪರತೆಯೊಂದಿಗೆ ಅಮೆರಿಕದ ಜನರ ಸೇವೆ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ’’ ಎಂದಿದ್ದಾರೆ.
ಈ ಐತಿಹಾಸಿಕ ನೇಮಕಾತಿಯನ್ನು ಮುಸ್ಲಿಮ್ ಹಕ್ಕುಗಳ ಪ್ರತಿಪಾದಕರು ವ್ಯಾಪಕವಾಗಿ ಸ್ವಾಗತಿಸಿದ್ದಾರೆ.
‘‘ನಮ್ಮ ದೇಶದ ಶ್ರೀಮಂತ ವೈವಿಧ್ಯತೆಯನ್ನು ಬಿಂಬಿಸುವ ನ್ಯಾಯಾಂಗವೊಂದು ಕಾನೂನಿನ ನ್ಯಾಯೋಚಿತ ಜಾರಿಗೆ ಸಹಾಯ ಮಾಡುತ್ತದೆ. ಈ ನೇಮಕಾತಿಯು ಅಮೆರಿಕನ್ ಮುಸ್ಲಿಮರಿಗೆ ಮಹತ್ವದ್ದಾಗಿದೆ’’ ಎಂದು ‘ಮುಸ್ಲಿಮ್ ಆ್ಯಡ್ವಕೇಟ್ಸ್’ನ ಕಾರ್ಯಕಾರಿ ನಿರ್ದೇಶಕಿ ಫರ್ಹಾನಾ ಖೇರಾ ‘ದ ಪೋಸ್ಟ್’ಗೆ ಹೇಳಿದರು.
ಆದಾಗ್ಯೂ, ಒಬಾಮ ಮುಂದಿನ ವರ್ಷದ ಜನವರಿಯಲ್ಲಿ ಅಧಿಕಾರದಿಂದ ಕೆಳಗಿಳಿಯುವ ಮುನ್ನ, ಖುರೇಶಿ ಅವರ ನಾಮಕರಣ ಖಚಿತಗೊಳ್ಳುವ ಸಾಧ್ಯತೆಯಿಲ್ಲ.
ಈ ವರ್ಷದ ಆದಿ ಭಾಗದಲ್ಲಿ ನಿಧನರಾದ ನ್ಯಾಯಾಧೀಶ ಆ್ಯಂಟನಿನ್ ಸ್ಕಾಲಿಯ ಸ್ಥಾನದಲ್ಲಿ ಈ ನೇಮಕಾತಿ ಮಾಡಲಾಗಿದೆ.







