ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯದಿಂದ ಹಸ್ತಕ್ಷೇಪ: ಹಿಲರಿ

ವಾಷಿಂಗ್ಟನ್,ಸೆಪ್ಟಂಬರ್ 7: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರನ್ನು ಗೆಲ್ಲಿಸುವುದಕ್ಕಾಗಿ ರಷ್ಯ ಅನಗತ್ಯ ಹಸ್ತಕ್ಷೇಪ ನಡೆಸುತ್ತಿದೆ ಎಂದು ಡೆಮಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿಕ್ಲಿಂಟನ್ ಹೇಳಿದ್ದಾರೆಂದು ವರದಿಯಾಗಿದೆ. ಟ್ರಂಪ್ ಅಭ್ಯರ್ಥಿಯಾದ ನಂತರ ರಷ್ಯ ಈ ವಿಷಯದಲ್ಲಿ ಸಕ್ರಿಯವಾಗಿ ಮಧ್ಯಪ್ರವೇಶಿಸಿದೆ. ಆದರೆ ಇಂತಹದೊಂದು ಅನುಭವ ಅಮೆರಿಕ ಇತಿಹಾಸದಲ್ಲಿ ಹೊಸದು ಎಂದು ಹಿಲರಿ ಕ್ಲಿಂಟನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಷ್ಯನ್ ಅಧ್ಯಕ್ಷ ವಾಲ್ಡಿಮಿರ್ ಪುಟಿನ್ ಬಹಳ ಹಿಂದೆಯೇ ಸಖ್ಯವನ್ನು ಘೋಷಿಸಿರುವ ಟ್ರಂಪ್ ರಷ್ಯನ್ ನೀತಿಗಳತ್ತ ವಾಲಿದ್ದಾರೆ. ಅಮೆರಿಕ ಚುನಾವಣೆಯಲ್ಲಿ ರಷ್ಯ ಹಸ್ತಕ್ಷೇಪ ಇದೆ ಎಂಬ ವರದಿಯ ಕುರಿತು ಅಮೆರಿಕನ್ ಇಂಟಲಿಜೆನ್ಸ್ ಏಜೆನ್ಸಿಗಳು ತನಿಖೆಮಾಡುತ್ತಿವೆ ಎಂದುವಾಷಿಂಗ್ಟನ್ ಪೋಸ್ಟ್ ಸಹಿತ ಹಲವು ಮಾಧ್ಯಮಗಳು ವರದಿಮಾಡಿವೆ. ರಷ್ಯ ಹಸ್ತಕ್ಷೇಪ ಮಾಹಿತಿ ವಿಶ್ವಸನೀಯ ಮೂಲಗಳಿಂದ ಲಭ್ಯವಾಗಿದೆ ಎಂದು ಹಿಲರಿ ಕ್ಲಿಂಟನ್ ಹೇಳಿದ್ದಾರೆಂದು ವರದಿಯಾಗಿದೆ.





