ದುಬೈ ಎಮಿರೇಟ್ಸ್ ವಿಮಾನ ದುರಂತ: ಅಂದು ನಡೆದದ್ದೇನು ?

ದುಬೈ, ಸೆ.7: ಎಮಿರೇಟ್ಸ್ ವಿಮಾನವೊಂದು ಕಳೆದ ತಿಂಗಳು ದುಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿ ಸ್ಫೋಟಗೊಂಡ ಘಟನೆಯ ಸಂಬಂಧದ ಪ್ರಾಥಮಿಕ ತನಿಖಾ ವರದಿ ಮಂಗಳವಾರ ಬಿಡುಗಡೆಗೊಂಡಿದೆ. ಸಂಯುಕ್ತ ಅರಬ್ ಸಂಸ್ಥಾನದ ನಾಗರಿಕ ವಾಯುಯಾನ ಪ್ರಾಧಿಕಾರ ಬಿಡುಗಡೆಗೊಳಿಸಿದ 28 ಪುಟಗಳ ವರದಿಯು, ಘಟನೆ ನಡೆದ ಮರುದಿನವೇ ಅಸೋಸಿಯೇಟೆಡ್ ಪ್ರೆಸ್ ಈ ಬಗ್ಗೆ ಸಂಬಂಧಿತರೊಂದಿಗೆ ಮಾತನಾಡಿ ಪ್ರಕಟಿಸಿದ ವಿಮರ್ಶಾತ್ಮಕ ವರದಿಗೆ ತಾಳೆಯಾಗುತ್ತಿದೆಯೆಂದು ಹೇಳಲಾಗುತ್ತಿದೆ.
ವಿಮಾನ ತಿರುವನಂತಪುರಂನಿಂದ ಹೊರಟು ದುಬೈ ಸಮೀಪಿಸಿದಾಗ ಗಾಳಿಯ ವೇಗ ಯಾ ದಿಕ್ಕು ಒಮ್ಮೆಗೇ ಬದಲಾವಣೆಗೊಂಡಿರುವ ಬಗ್ಗೆ ವಿಮಾನ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿತ್ತು ಎಂದು ತನಿಖೆಯಲ್ಲಿ ಕಂಡು ಬಂದಿದೆ. ಈ ಅಪಘಾತ ನಡೆಯುವ ಹತ್ತು ನಿಮಿಷಗಳ ಮೊದಲು ಎರಡು ವಿಮಾನಗಳು ಭೂಸ್ಪರ್ಶ ಮಾಡದೆ ಹಿಂದಿರುಗಿದ್ದರೆ ಇನ್ನೆರಡು ವಿಮಾನಗಳು ಯಾವುದೇ ತೊಂದರೆಯಿಲ್ಲದೆ ಭೂಸ್ಪರ್ಶ ಮಾಡಿದ್ದವು ಎಂದು ವರದಿಯಲ್ಲಿ ಹೇಳಲಾಗಿದೆ. ವಿಮಾನ ಭೂಮಿಗೆ ಹತ್ತಿರವಾಗುತ್ತಿದ್ದಂತೆ ಅದರ ಎದುರು ದಿಕ್ಕಿನಲ್ಲಿ ಬರುತ್ತಿದ್ದ ಗಾಳಿ ವಿರುದ್ಧ ದಿಕ್ಕಿನಿಂದ ಬರಲು ಆರಂಭಿಸಿ ಮತ್ತೆ ಮೊದಲಿನಂತಾಗುತ್ತಿತ್ತು, ಎಂದು ವರದಿ ಹೇಳಿದೆ.
‘‘ಬಲಬದಿಯ ಲ್ಯಾಂಡಿಂಗ್ ಗೇರ್ ಮೊದಲು ಭೂಸ್ಪರ್ಶ ಮಾಡಿ ಎಡಬದಿಯ ಗೇರ್ ಮೂರು ಸೆಕೆಂಡುಗಳ ನಂತರ ಭೂಸ್ಪರ್ಶ ಮಾಡಿದ್ದರೂ ನೋಸ್ ಗೇರ್ ಇನ್ನೂ ಗಾಳಿಯಲ್ಲೇ ಇತ್ತು. ಆಗ ಮತ್ತೆ ಸಿಬ್ಬಂದಿಗೆ ‘ಲಾಂಗ್ ಲ್ಯಾಂಡಿಂಗ್’ ಎಚ್ಚರಿಕೆ ಬಂದಿತ್ತು ಹಾಗೂ ವಿಮಾನ ಭೂಸ್ಪರ್ಶ ಮಾಡಬೇಕಿದ್ದ ಜಾಗದಲ್ಲಿ ಭೂಸ್ಪರ್ಶ ಮಾಡಿಲ್ಲವೆಂದು ಸಂದೇಶ ಬಂದಿತ್ತು. ವಿಮಾನ ಮತ್ತೆ 85 ಅಡಿಯಷ್ಟು ಮೇಲಕ್ಕೇರಿತ್ತು ಹಾಗೂ ಎರಡನೆ ಬಾರಿ ಲ್ಯಾಂಡಿಂಗ್ ಯತ್ನ ಮಾಡಿತ್ತು, ಮತ್ತೆ ಲ್ಯಾಂಡಿಂಗ್ ಗೇರ್ ಹಿಂದಕ್ಕೆ ಸರಿಸಿ ವಿಮಾನದ ಇಂಜಿನುಗಳನ್ನು ತಮ್ಮ ಪೂರ್ಣ ಸಾಮರ್ಥ್ಯ ಉಪಯೋಗಿಸುವಂತೆ ಮಾಡಿದಾಗ ‘ಡೋಂಟ್ ಸಿಂಕ್, ಡೋಂಡ್ ಸಿಂಕ್’ ಎಂಬ ಎಚ್ಚರಿಕೆ ಬಂದರೂ ಆಗ ಸಮಯ ಮೀರಿ ಹೋಗಿ ವಿಮಾನ ಗಂಟೆಗೆ 144 ಮೈಲು ವೇಗದಲ್ಲಿ ಕೆಳಗಿಳಿದು ತುರ್ತು ಭೂಸ್ಪರ್ಶ ಮಾಡಿತ್ತು. ಈ ಸಂದರ್ಭ ಅದರ ಬಲಬದಿಯ ಇಂಜಿನ್ ಹಾನಿಗೊಂಡಿತ್ತು. ಇದಾದ ಒಂಬತ್ತು ನಿಮಿಷಗಳಲ್ಲಿಯೇ ವಿಮಾನದ ಇಂಧನ ಟ್ಯಾಂಕ್ ಸ್ಫೋಟಗೊಂಡಿತ್ತು,’’ ಎಂದು ಪ್ರಾಥಮಿಕ ತನಿಖಾ ವರದಿ ತಿಳಿಸಿದೆ.
ದುರಂತ ಸಂಭವಿಸಿದಾಗ ವಿಮಾನದ ಹತ್ತು ತುರ್ತು ದ್ವಾರಗಳಲ್ಲಿ ಕೇವಲ ಐದು ದ್ವಾರಗಳನ್ನು ಮಾತ್ರ ಬಳಸಲಾಗಿತ್ತು ಎಂದು ತನಿಖೆಯಲ್ಲಿ ಕಂಡು ಕೊಳ್ಳಲಾಗಿದೆ. ಮುಖ್ಯ ಪೈಲಟ್ ಹಾಗೂ ಹಿರಿಯ ಕ್ಯಾಬಿನ್ ಸಿಬ್ಬಂದಿಯೊಬ್ಬರು ವಿಮಾನ ಸ್ಫೋಟಗೊಳ್ಳುವ ಮುನ್ನ ಅದರಿಂದ ಹೊರಬಂದ ಕೊನೆಯವರಾಗಿದ್ದರು. ಈ ಘಟನೆಗೆ ಯಾರು ಕಾರಣರು ಅಥವಾ ಈ ವಿಮಾನದ ಪೈಲಟ್ ಮತ್ತೊಮ್ಮೆ ಭೂಸ್ಪರ್ಶ ಮಾಡುವ ಮೊದಲು ವಿಮಾನವನ್ನು ಆಗಸದಲ್ಲಿ ಸ್ವಲ್ಪ ಹೊತ್ತು ಹಾರಾಟ ನಡೆಸಿಲ್ಲವೇಕೆ ಎಂಬ ಅಂಶಗಳ ಬಗ್ಗೆ ವರದಿಯಲ್ಲಿ ಏನೂ ಹೇಳಲಾಗಿಲ್ಲ.
ಈ ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸುವುದಾಗಿ ಎಮಿರೇಟ್ಸ್ ಏರ್ ಲೈನ್ಸ್ ಹೇಳಿದೆ.







