ಮದರ್ ತೆರೇಸಾ ಸಂತಪದವಿ ಕುರಿತು ಬಿಜೆಪಿ ಸಂಸದ ಅಪಸ್ವರ

ಹೊಸದಿಲ್ಲಿ,ಸೆ.7: ಮದರ್ ತೆರೇಸಾರಿಗೆ ನೀಡಲಾದ ಸಂತ ಪದವಿ ನೀಡಿದ್ದನ್ನು ಬಿಜೆಪಿ ಸಂಸದ ಸುಧೀರ್‌ಗುಪ್ತ ಕಟುವಾಗಿ ಟೀಕಿಸಿದ್ದಾರೆಂದು ವರದಿಯಾಗಿದೆ. ಅವರಿಗೆ ಆ ಪದವಿ ನೀಡಿದ್ದು ಆಕ್ಷೇಪಾರ್ಹವಾಗಿದೆ ಎಂದು ಸಂಸದ ಹೇಳಿದ್ದಾರೆ. ಗುಪ್ತ,ಮಧ್ಯಪ್ರದೇಶದ ಮಂದಸಾರ್ ಲೋಕಸಭಾ ಕ್ಷೇತ್ರದ ಜನಪ್ರತಿನಿಧಿಯಾಗಿದ್ದಾರೆ.
ಮದರ್ ತೆರೇಸಾ ಬಹಳಷ್ಟು ಮಕ್ಕಳನ್ನು ಅವರ ಅನುಮತಿಯಿಲ್ಲದೆಯೇ ಕ್ರೈಸ್ತ ಧರ್ಮಕ್ಕೆ ಮತಾಂತರಿಸಿದ್ದಾರೆ. ಹೀಗೆ ಧರ್ಮ ಬದಲಾಯಿಸುವಾಗ ಅವರ ಅನುಮತಿಯನ್ನು ತೆರೇಸಾ ಪಡೆದಿಲ್ಲ ಎಂದು ಸಂಸದ ಆರೋಪಿಸಿದ್ದಾರೆ. ಯಾವುದೇ ದಾಖಲೆಗಳಿಲ್ಲದೆ ಮತಾಂತರ ಪ್ರಕ್ರಿಯೆ ನಡೆದಿವೆ. ಸಾಮಾಜಿಕ ಸುಧಾರಣೆಗಾಗಿ ಪ್ರಯತ್ನಿಸುವ ಬಹಳಷ್ಟು ಮಂದಿ ನಮ್ಮಲ್ಲಿದ್ದಾರೆ.ಹಾಗಂತ ಅದರ ಹೆಸರಿನಲ್ಲಿ ಸಂತ ಪದವಿಯನ್ನು ಬಯಸುವುದು ಆಕ್ಷೇಪಾರ್ಹವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಮಾರ್ಕಾಂಡೇಯ ಕಟ್ಜು ಮದರ್ ತೆರೇಸಾರನ್ನು ಕಟುವಾಗಿ ಟೀಕಿಸಿದ್ದರು. ಮದರ್ ತೆರೇಸ ಪ್ರದರ್ಶನ ಪ್ರಿಯೆ ಮತ್ತು ವಂಚನೆ ನಡೆಸಿದ ಮಹಿಳೆ ಹಾಗೂ ಧರ್ಮಭ್ರಾಂತರಾಗಿದ್ದರು ಎಂದು ಕಟ್ಜು ಟೀಕಿಸಿದ್ದರೆಂದು ವರದಿ ತಿಳಿಸಿದೆ.





