ಸಿದ್ದರಾಮಯ್ಯ ತಮಿಳುನಾಡಿಗೆ ಕಾವೇರಿ ನೀರು ಬಿಡದೆ ಇರಬಹುದಿತ್ತೇ ?
ಇಲ್ಲಿದೆ ಉತ್ತರ

ಸುಪ್ರೀಂಕೋರ್ಟ್ ಸೂಚನೆಯಂತೆ ತಮಿಳುನಾಡಿಗೆ ನೀರು ಬಿಡುವುದನ್ನು ಹೊರತುಪಡಿಸಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೇರೆ ಆಯ್ಕೆಗಳಿತ್ತೇ? ಇಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಬಂದ ಕೆಲ ಸಲಹೆಗಳಂತೆ ಸುಪ್ರೀಂಕೋರ್ಟ್ ಸೂಚನೆಯನ್ನು ಪಾಲಿಸದೇ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಿತ್ತು. ಆಗ ಜನರಿಗೆ ಪ್ರೀತಿಪಾತ್ರರಾಗುತ್ತಿದ್ದರು ಮತ್ತು ಮುಂದಿನ ಚುನಾವಣೆಯಲ್ಲಿ ಸುಲಭ ಗೆಲುವಿಗೆ ಕಾರಣವಾಗುತ್ತಿತ್ತು ಎಂದು ಹಿಂದೆ ಗಟ್ಟಿ ನಿರ್ಧಾರ ಕೈಗೊಂಡಿದ್ದ ಎಸ್.ಬಂಗಾರಪ್ಪ ಅವರ ನಿದರ್ಶನವನ್ನು ಉದಾಹರಿಸಿದ್ದರು.
1991ರಲ್ಲಿ ಬಂಗಾರಪ್ಪ ಬಿಗಿ ಕ್ರಮಗಳನ್ನು ಕೈಗೊಂಡು, ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ತೀರ್ಪಿನ ವಿರುದ್ಧ ಹಿಂಸಾತ್ಮಕ ಬಂದ್ ಕೂಡಾ ಪ್ರಾಯೋಜಿಸಿದ್ದರು. ಆದರೆ ಇದು ಅವರಿಗೆ ರಾಜಕೀಯವಾಗಿ ನೆರವಾಯಿತೇ?
ಬಂಗಾರಪ್ಪ ಅವರನ್ನು ಅವರ ಪಕ್ಷವೇ ಹೊರಹಾಕಿತು. ಅವರು ಕಟ್ಟಿದ ಕರ್ನಾಟಕ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಸಾಧನೆ ಮಾಡಿತು. ಕಾವೇರಿ ಅವರನ್ನು ರಕ್ಷಿಸಲಿಲ್ಲ.
ಎಚ್.ಡಿ.ದೇವೇಗೌಡ ಅವರೂ ದೊಡ್ಡದಾಗಿ ಅಬ್ಬರಿಸಿದರು. ಆದರೆ ಕೇಂದ್ರ ಸರ್ಕಾರ ಅವರ ಸರ್ಕಾರವನ್ನು ವಜಾ ಮಾಡುವ ಎಚ್ಚರಿಕೆ ನೀಡಿದ ಬಳಿಕ ತಮಿಳುನಾಡಿಗೆ ನೀರು ಬಿಟ್ಟರು.
ಮಾತಿನಂತೆ ನಡೆದುಕೊಂಡ ಏಕೈಕ ಸಿಎಂ ಎಂದರೆ ಎಸ್.ಎಂ.ಕೃಷ್ಣ. ಸುಪ್ರೀಂಕೋರ್ಟ್ ತೀರ್ಪಿನ ಅನುಷ್ಠಾನಕ್ಕೆ ನಿರಾಕರಿಸಿ ಅವರು ಬೆಂಗಳೂರಿನಿಂದ ಮಂಡ್ಯಕ್ಕೆ ಪಾದಯಾತ್ರೆ ಕೈಗೊಂಡರು. ಆದರೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆಯ ಎಚ್ಚರಿಕೆ ನೀಡಿದ ಬಳಿಕ, ಬೇಷರತ್ ಕ್ಷಮೆ ಯಾಚಿಸಿ ನೀರು ಹರಿಸಿದರು.
ಸೈದ್ಧಾಂತಿಕವಾಗಿ ಕಾವೇರಿ ಅಲೆಯಲ್ಲಿ ಅವರು ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕಿತ್ತು. ಆದರೆ ಕೃಷ್ಣ ಹಾಗೂ ಕಾಂಗ್ರೆಸ್ ಪಕ್ಷ ಕೊಚ್ಚಿಕೊಂಡು ಹೋಯಿತು.
ಸಿದ್ಧರಾಮಯ್ಯ ತಮ್ಮ ಸರ್ಕಾರವನ್ನು ಕಾವೇರಿಗಾಗಿ ಬಲಿಕೊಟ್ಟರೆ, ಒಂದಷ್ಟು ಜನಬೆಂಬಲವನ್ನೇನೋ ಪಡೆಯುತ್ತಿದ್ದರು. ಆದರೆ ಅದು ಅವರು ಅಧಿಕಾರಕ್ಕೆ ಮರಳುವುದನ್ನು ಖಾತ್ರಿಪಡಿಸುತ್ತಿರಲಿಲ್ಲ. ಕಾವೇರಿ ಭಾವನಾತ್ಮಕ ವಿಷಯವಾದರೂ, ಅದು ದಕ್ಷಿಣ ಕರ್ನಾಟಕಕ್ಕೆ ಅದರಲ್ಲೂ ಮಂಡ್ಯ ಭಾಗಕ್ಕೆ ಮಾತ್ರ ಸೀಮಿತವಾದ ವಿಷಯ. ಇದು ರಾಜ್ಯದ ಇತರ ಭಾಗದ ಮತಗಳ ಮೇಲೆ ಪರಿಣಾಮ ಬೀರುವ ಪರಿಣಾಮ ಕ್ಷೀಣ.
ಈ ಹಿಂದಿನ ಮುಖ್ಯಮಂತ್ರಿಗಳು ಮಾಡಿದಂತೆ ಕಾವೇರಿ ನೀರನ್ನು ಬಿಡುವ ಮೂಲಕ ಸಿದ್ದರಾಮಯ್ಯ ಸರಿಯಾದ ಕ್ರಮವನ್ನೇ ತೆಗೆದು ಕೊಂಡಿದ್ದಾರೆ.
ಇಲ್ಲದಿದ್ದರೆ ಸುಪ್ರಿಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಕಳಂಕ ಹೊತ್ತ ಕರ್ನಾಟಕ ಅದರ ದೂರಗಾಮಿ ಪರಿಣಾಮಗಳನ್ನು ಎದುರಿಸಬೇಕಾಗುತ್ತಿತ್ತು
ಇದು ಲೇಖಕರ ಕೆಳಗೆ ನೀಡಲಾದ ಇಂಗ್ಲಿಷ್ ಫೇಸ್‌ಬುಕ್ ಪೋಸ್ಟ್ ನ ಕನ್ನಡ ಅನುವಾದ







