ಹಾಸನ: ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಕರವೇ ಪ್ರತಿಭಟನೆ
.jpg)
ಹಾಸನ, ಸೆ.7: ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ತಮಿಳು ಭಾಷೆಯ ಪತ್ರಿಕೆಯನ್ನು ಸುಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿ ಬುಧವಾರ ಬೆಳಗ್ಗೆ ಕರವೇ ಕಾರ್ಯಕರ್ತರು ತಮಿಳುನಾಡಿನ ವಿರುದ್ಧ ಘೋಷಣೆ ಕೂಗಿದರು. ಮುಂಗಾರು ಕೂಡ ಮುನಿಸಿಕೊಂಡು ಅಣೆಕಟ್ಟೆಗಳೆಲ್ಲಾ ಭಣಗುಡುತ್ತಿದೆ. ಇಂತಹ ವೇಳೆ ತಮಿಳುನಾಡಿಗೆ ನೀರು ಬಿಟ್ಟರೇ ಇಲ್ಲಿನ ಜನತೆ ಸಂಕಷ್ಟ ಎದುರಿಸಬೇಕಾಗುತ್ತದೆ. ಪ್ರತಿ ವರ್ಷ ಕರ್ನಾಟಕ ರಾಜ್ಯಕ್ಕೆ ತಮಿಳುನಾಡಿನಿಂದ ಅನ್ಯಾಯವಾಗುತ್ತಿದ್ದರೂ ಇದನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡುವಲ್ಲಿ ರಾಜ್ಯ ಸರಕಾರ ಎಡವಿದೆ ಎಂದು ದೂರಿದರು. ರಾಜ್ಯದ ಪರಿಸ್ಥಿತಿಯನ್ನು ನ್ಯಾಯಾಲಯಕ್ಕೆ ನೀಡುವಲ್ಲಿ ವಿಫಲವಾಗುತ್ತಿದೆ. ಈಗಾಗಲೇ ಏಕಾಏಕಿ ಹೇಮೆಯ ನೀರನ್ನು ಬಿಡಲಾಗುತ್ತಿದೆ. ಈಗೆ ಮುಂದುವರೆದರೆ ಕೆಲ ದಿನಗಳಲ್ಲೆ ನೀರಿಗೆ ಪರಿತಪಿಸುವಂತಾಗುತ್ತದೆ ಎಂದು ಹೇಳಿದರು.
ಕೂಡಲೇ ಸರಕಾರ ನೀರು ಹರಿಸುವುದನ್ನು ನಿಲ್ಲಿಸಬೇಕು ಇಲ್ಲವಾದರೆ ಬೃಹತ್ ಪ್ರತಿಭಟನೆ ಮಾಡುವುದಾಗಿ ಇದೆ ವೇಳೆ ಕರವೇ ಜಿಲ್ಲಾಧ್ಯಕ್ಷ ಸತೀಶ್ ಪಟೇಲ್ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕರವೇ ಕಾರ್ಮಿಕ ಘಟಕದ ಅಧ್ಯಕ್ಷ ಶ್ರೀನಿವಾಸ್, ನಗರ ಯುವ ಘಟಕದ ಅಧ್ಯಕ್ಷ ಅಭಿಷೇಕ್, ಯುವ ಮುಖಂಡ ರಾಕೇಶ್, ಜಿಲ್ಲಾ ಉಪಾಧ್ಯಕ್ಷರಾದ ದೇವು ಇತರರು ಪಾಲ್ಗೊಂಡಿದ್ದರು.





