ಪೋಕೆಮನ್ ಗೋ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುತ್ತಿದೆಯೇ...?
ಸರಕಾರಗಳಿಗೆ ಹೈಕೋರ್ಟ್ ಪ್ರಶ್ನೆ

ಅಹ್ಮದಾಬಾದ್,ಸೆ.7: ಭಾರತದಲ್ಲಿ ವಿವಿಧ ಧಾರ್ಮಿಕ ಸ್ಥಳಗಳಿಂದ ಮೊಟ್ಟೆಗಳನ್ನು ಸಂಗ್ರಹಿಸುವುದನ್ನು ತೋರಿಸುವ ಮೂಲಕ ಜನಪ್ರಿಯ ವೀಡಿಯೊ ಗೇಮ್ ‘ಪೋಕೆಮನ್ ಗೋ’ಹಿಂದುಗಳ ಮತ್ತು ಜೈನರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುತ್ತಿದೆ ಎಂಬ ಆರೋಪಕ್ಕೆ ಉತ್ತರಿಸುವಂತೆ ಕೇಂದ್ರ ಮತ್ತು ಗುಜರಾತ್ ಸರಕಾರಗಳಿಗೆ ಗುಜರಾತ್ ಉಚ್ಚ ನ್ಯಾಯಾಲಯವು ನೋಟಿಸುಗಳನ್ನು ಹೊರಡಿಸಿದೆ. ಆಟವನ್ನು ಅಭಿವೃದ್ಧಿಗೊಳಿಸಿರುವ ಸ್ಯಾನ್ ಫ್ರಾನ್ಸಿಸ್ಕೋದ ನಿಯಾಂಟಿಕ್ ಕಂಪನಿಗೂ ನೋಟಿಸನ್ನು ಹೊರಡಿಸಲಾಗಿದೆ.
ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಉಚ್ಚ ನ್ಯಾಯಾಲಯವು ಬುಧವಾರ ಉಭಯ ಸರಕರಗಳಿಗೆ ನಿರ್ದೇಶ ನೀಡಿತು.
ಪ್ರಕರಣವನ್ನು ದಾಖಲಿಸಿರುವ ಅಲಯ್ ಅನಿಲ ದವೆ ಅವರು, ಹಿಂದು ಮತ್ತು ಜೈನ್ ಧರ್ಮಗಳ ದೇವಸ್ಥಾನಗಳು ಮತ್ತು ಮಂದಿರಗಳಲ್ಲಿ ಮೊಟ್ಟೆಗಳನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.
ಜನರು ಮೊಟ್ಟೆಗಳ ಆಕಾರದಲ್ಲಿರುವ ಅಂಕಗಳನ್ನು ಪಡೆಯಲು ಈ ಆಟವನ್ನು ಆಡುತ್ತಿದ್ದಾರೆ ಮತ್ತು ಈ ಮೊಟ್ಟೆಗಳ ಆಕಾರಗಳು ಸಾಮಾನ್ಯವಾಗಿ ವಿವಿಧ ಧಾರ್ಮಿಕ ಗುಂಪುಗಳ ಆರಾಧನಾ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹಿಂದುಗಳು ಮತ್ತು ಜೈನರ ದೇವಸ್ಥಾನಗಳಲ್ಲಿ ಮೊಟ್ಟೆಗಳನ್ನಿರಿಸುವುದು ದೈವನಿಂದೆಯಾಗುತ್ತದೆ. ಆದ್ದರಿಂದ ತನ್ನ ಕಕ್ಷಿದಾರರು ದೇಶದಲ್ಲಿ ಈ ಆಟವನ್ನು ನಿಷೇಧಿಸುವಂತೆ ಕೋರಿದ್ದಾರೆ ಎಂದು ದವೆ ಪರ ವಕೀಲ ನಚಿಕೇತ ದವೆ ತಿಳಿಸಿದರು.





