ಸಾಲಿಗ್ರಾಮ: ನಿವೇಶನ ಹಕ್ಕುಪತ್ರಕ್ಕೆ ಒತ್ತಾಯಿಸಿ ಪಟ್ಟಣ ಪಂಚಾಯತ್ ಎದುರು ಧರಣಿ

ಸಾಲಿಗ್ರಾಮ, ಸೆ.7: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ, ಗುಂಡ್ಮಿ, ಚಿತ್ರಪಾಡಿ ಹಾಗೂ ಪಾರಂಪಳ್ಳಿ ಗ್ರಾಮಗಳ ಬಡನಿವೇಶನ ರಹಿತರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ತಾಲೂಕು ಸಮಿತಿ ನೇತೃತ್ವದಲ್ಲಿ ಮನೆ, ನಿವೇಶನ ಹಕ್ಕು ಪತ್ರ ಕೋರಿ ಸಲ್ಲಿಸಿದ ಅರ್ಜಿಯನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಒತ್ತಾಯಿಸಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿ ಎದುರು ಬೃಹತ್ ಮುಷ್ಕರ ನಡೆಸಿದರು.
ಪ್ರತಿಭಟನೆಗೆ ಮುನ್ನ ಸಾಲಿಗ್ರಾಮದ ಗಣೇಶ ಕೃಪಾ ಸಭಾಭವನದಲ್ಲಿ ಜರಗಿದ ನಿವೇಶನ ರಹಿತ ಅರ್ಜಿದಾರರ ಸಮಾವೇಶದಲ್ಲಿ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಾಲಿಗ್ರಾಮ ಪ. ಪಂಚಾಯತ್ ವ್ಯಾಪ್ತಿಯ 4 ಗ್ರಾಮಗಳ ಮನೆ, ನಿವೇಶನ ರಹಿತರು ಭೂಮಿ ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಸಲ್ಲಿಸಿದ 838 ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ, ನಿವೇಶನ ರಹಿತರ ಅಂತಿಮ ಪಟ್ಟಿಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಇದರಲ್ಲಿ ವಿಫಲವಾದರೆ ಭೂಮಿ ಹಕ್ಕಿನ ತಮ್ಮ ಹೋರಾಟವನ್ನು ತೀವ್ರ ಗೊಳಿಸಲಾಗುವುದು ಎಂದು ಎಚ್ಚರಿಸಿದರು. ಕೃಷಿ ಕೂಲಿಕಾರರ ಸಂಘದ ಉಡುಪಿ ತಾಲೂಕು ಅಧ್ಯಕ್ಷ ಎಚ್. ವಿಠಲ ಪೂಜಾರಿ ಮಾತನಾಡಿ, ಸರಕಾರಿ ಸ್ಥಳವನ್ನು ಗುರುತಿಸಿ ನಿವೇಶನ ರಹಿತರಿಗೆ ಭೂಮಿ ಹಕ್ಕು ಪತ್ರ ಮಂಜೂರು ಮಾಡಬೇಕು ಎಂದು ಹೇಳಿದರು.
ಬಳಿಕ ಸಾಲಿಗ್ರಾಮದ ಪ್ರಮುಖ ರಸ್ತೆಯಲ್ಲಿ ನಿವೇಶನ ರಹಿತ ಅರ್ಜಿದಾರರು ಪ್ರತಿಭಟನಾ ಮೆರವಣಿಗೆ ನಡೆಸಿ ಭೂಮಿಹಕ್ಕು ಪತ್ರಕ್ಕಾಗಿ ಘೋಷಣೆಗಳನ್ನು ಕೂಗಿದರು. ಮೆರವಣಿಗೆ ಕೊನೆಗೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಚೇರಿ ಎದುರು ಬೃಹತ್ ಮುಷ್ಕರ ನಡೆಸಲಾಯಿತು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕೃಷಿ ಕೂಲಿಕಾರರ ಸಂಘದ ಸಾಲಿಗ್ರಾಮ ಸಮಿತಿ ಅಧ್ಯಕ್ಷ ಮಾಧವ ಸಾಲಿಗ್ರಾಮ, ಕಾರ್ಯದರ್ಶಿ ರಾಮ ಕಾರ್ಕಡ, ಕವಿರಾಜ ಉಡುಪಿ, ಶೋಭಾ ಗುಂಡ್ಮಿ, ಪದ್ಮಾವತಿ ಶೆಟ್ಟಿ, ಕುಶಲ ಇವರು ಉಪಸ್ಥಿತರಿದ್ದರು. ರ್ಯಾಲಿ, ಪ್ರತಿಭಟನಾ ಪ್ರದರ್ಶನದ ನಂತರ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ವಸುಮತಿ ನಾಗೇಶ ನಾಯರಿ, ಉಪಾಧ್ಯಕ್ಷ ಉದಯ ಪೂಜಾರಿ, ಸದಸ್ಯರಾದ ಕರುಣಾಕರ ಪೂಜಾರಿ ಇವರಿಗೆ ನಿವೇಶನ ರಹಿತರ ಭೂಮಿ ಹಕ್ಕಿನ ಬೇಡಿಕೆಯ ಮನವಿಯನ್ನು ಹಸ್ತಾಂತರಿಸಲಾಯಿತು.







