ಉಳ್ಳಾಲ: ಹಳೇಕೋಟೆ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಉಳ್ಳಾಲ, ಸೆ.7: ಪ್ರತಿಯೊಬ್ಬರ ಜೀವನದ ಏಳು-ಬೀಳಿಗೆ ಗುರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣನಾಗುತ್ತಾನೆ. ಏಕೆಂದರೆ ಒಬ್ಬ ಶಿಕ್ಷಕನು ವಿದ್ಯಾರ್ಥಿಗಳಲ್ಲಿರುವ ಪ್ರಜ್ಞೆಯನ್ನು ಜಾಗೃತಗೊಳಿಸುವ ಶಕ್ತಿಯಾಗಿರುತ್ತಾನೆ. ಇಂದಿನ ವೇಗದ ಯುಗದ ವ್ಯವಸ್ಥೆಯಿಂದ ಗುರುಗಳ ಮಹತ್ವ ಕಡಿಮೆಯಾಗಿದೆ. ಶಿಕ್ಷಕರನ್ನೇ ನೋಡದೆ ಆನ್‌ಲೈನ್ ಶಿಕ್ಷಣ, ವರ್ಚ್ಯುಯಲ್ ಶಿಕ್ಷಣ ವ್ಯವಸ್ಥೆ ಪ್ರಚಲಿತವಾಗುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ವಿದ್ಯಾರ್ಥಿಗಳು ತಮ್ಮ ಹೊಸ ಸಂಶೋಧನೆಗಳನ್ನು ರಚನಾತ್ಮಕ ಕೆಲಸಗಳಿಗೆ ಉಪಯೋಗಿಸುವಂತಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ. ಜ್ಞಾನೇಶ್ ಅಭಿಪ್ರಾಯಪಟ್ಟರು.
ಅವರು ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಅನುದಾನಿತ ಸೈಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಯದ್ ಮದನಿ ಪ್ರೌಢಶಾಲೆ ಹಳೇಕೋಟೆ ಉಳ್ಳಾಲ ಇದರ ವತಿಯಿಂದ ಮಂಗಳವಾರ ಹಳೇಕೋಟೆ ಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ , ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಮುಖ್ಯಶಿಕ್ಷಕಿಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯವಾಗಿದೆ. ಶಿಕ್ಷಕರು ಬೋಧನಾ ವೃತ್ತಿಗೆ ಬಂದ ಮೇಲೆ ತನ್ನಲ್ಲಿರುವ ದುರ್ಮಾರ್ಗಗಳನ್ನು ಹೋಗಲಾಡಿಸಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಆದರ್ಶ ವ್ಯಕ್ತಿಯಾಗಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೈಯದ್ ಮದನಿ ದರ್ಗಾದ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹ ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಸ್ವಾರ್ಥ ರಹಿತ ಸೇವೆಯಿಂದ ವಿದ್ಯಾರ್ಥಿಗಳನ್ನು ಸಮಾಜಮುಖಿ ಚಿಂತನೆಯೊಂದಿಗೆ, ಜೀವನದಲ್ಲಿ ಯಶಸ್ವಿಗೊಳಿಸುವಂತ ತರಬೇತಿ ಶಿಕ್ಷಕ ವರ್ಗದಿಂದ ಆಗಬೇಕಿದೆ ಎಂದರು.
ನಗರಸಭೆಯ ಸದಸ್ಯ ಫಾರೂಕ್ ಉಳ್ಳಾಲ್, ಶಾಲಾಭಿವೃದ್ಧಿ ಸಮಿತಿಯ ಸಂಚಾಲಕ ಅರೆಬಿಕ್ ಟ್ರಸ್ಟಿನ ಉಪಾಧ್ಯಕ್ಷ ಯು.ಎಚ್.ಮುಹಮ್ಮದ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯು.ಎನ್.ಇಬ್ರಾಹೀಂ, ಹಿರಿಯರಾದ ರಝಾಕ್, ಇಸ್ಮಾಯೀಲ್ ಹಾಜಬ್ಬ, ಶಾಲಾಭಿವೃದ್ಧಿ ಸಮಿತಿಯ ಅಲ್ತಾಫ್, ಝೈನುದ್ದೀನ್, ಯು.ಎಚ್.ಮುಹಮ್ಮದ್, ಆಡಳಿತಾಧಿಕಾರಿ ಅಬ್ದುಲ್ಲತೀಫ್, ಫಾರೂಕ್ ಯು.ಎಚ್., ಟಿಪ್ಪು ಸುಲ್ತಾನ್ ಕಾಲೇಜು ಪ್ರಾಂಶುಪಾಲ ಟಿ.ಪಿ. ಮೊಯ್ದೀನ್, ಹಝ್ರತ್ ಶಾಲೆಯ ರಸೂಲ್ ಖಾನ್, ಇಮ್ತಿಯಾಝ್, ಹಳೆವಿದ್ಯಾರ್ಥಿ ಸಂಘದ ರಫೀಕ್, ಶಾಲಾ ಮುಖ್ಯೋಪಾಧ್ಯಾಯಿನಿ ಸಂಗೀತಾ, ನಸೀಮಾ, ಪ್ರತಿಭಾ ರಮ್ಲತ್, ಗ್ಲಾಡಿಯಸ್ ಮುಖ್ಯ ಅತಿಥಿಗಳಾಗಿದ್ದರು.
ಹಳೇಕೋಟೆ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೆ.ಎಂ.ಕೆ.ಮಂಜನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸನಾ, ಅಲ್ನಾಝ್ ಕಾರ್ಯಕ್ರಮ ನಿರೂಪಿಸಿದರು.







