ದಾಖಲಾದ 24 ತಾಸುಗಳಲ್ಲಿ ವೆಬ್‌ಸೈಟ್‌ಗೆ ಎಫ್‌ಐಆರ್ ಅಪ್‌ಲೋಡ್

ಹೊಸದಿಲ್ಲಿ, ಸೆ.7: ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ಗಳು ದಾಖಲಾದ 24 ತಾಸುಗಳ ಒಳಗಾಗಿ, ಅವುಗಳನ್ನು ತಮ್ಮ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್ ಮಾಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.
ಆದಾಗ್ಯೂ, ಅಂತರ್ಜಾಲ ಸಂಪರ್ಕ ದುರ್ಬಲವಾಗಿರುವ ದುರ್ಗಮ ಕಣಿವೆಗಳಲ್ಲಿರುವ ರಾಜ್ಯಗಳಿಗೆ ಎಫ್‌ಐಆರ್ ಅಪ್‌ಲೋಡ್ ಮಾಡಲು 72 ತಾಸುಗಳ ವರೆಗೆ ಅವಧಿ ವಿಸ್ತರಣೆಯನ್ನು ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಸಿ.ನಾಗಪ್ಪನ್‌ರನ್ನೊಳಗೊಂಡ ಪೀಠ ಮಾಡಿದೆ. ಭಯೋತ್ಪಾದನೆ-ಬಂಡುಕೋರ ಚಟುವಟಿಕೆ ಹಾಗೂ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಎಫ್‌ಐಆರ್ ಅಪ್‌ಲೋಡ್ ಮಾಡುವುದರಿಂದ ರಾಜ್ಯಗಳ ಪೊಲೀಸ್ ಅಧಿಕಾರಿಗಳಿಗೆ ಅದು ವಿನಾಯ್ತಿ ನೀಡಿದೆ.
ಆರೋಪಿಗಳು ನ್ಯಾಯಾಲಯಗಳ ಮುಂದೆ, ಅವರ ವಿರುದ್ಧ ಎಫ್‌ಐಆರ್‌ಗಳನ್ನು ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್ ಮಾಡದಿರುವ ಅಂಶದ ಲಾಭ ಪಡೆಯಲು ಅವಕಾಶ ನೀಡಬಾರದೆಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ವಿಚಾರಣೆಯ ವೇಳೆ ನ್ಯಾಯಾಲಯವು ಮೊದಲು ರಾಜ್ಯಗಳಿಗೆ ಎಫ್‌ಐಆರ್ ಅಪ್‌ಲೋಡ್ ಮಾಡಲು 48 ತಾಸುಗಳ ಸಮಯಾವಕಾಶ ನೀಡಿತ್ತು. ಆದರೆ, ಬಳಿಕದು ಈ ಗಡುವನ್ನು 24 ತಾಸುಗಳಿಗೆ ನಿಗದಿಪಡಿಸಿತು.
ಈ ವಿಷಯದಲ್ಲಿ ಭಾರತದ ಯುವ ವಕೀಲರ ಸಂಘಟನೆ ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ಮೇಲೆ ನ್ಯಾಯಾಲಯದ ಈ ಆದೇಶ ಹೊರಟಿದೆ. ಎಫ್‌ಐಆರ್ ದಾಖಲಾದ 24 ತಾಸುಗಳಲ್ಲಿ ಅದನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವಂತೆ ದಿಲ್ಲಿ ಹೈಕೋರ್ಟ್ ನಗರ ಪೊಲೀಸರಿಗೆ ನೀಡಿದ್ದ ಆದೇಶವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಕೆಲವು ತಿದ್ದುಪಡಿಗಳೊಂದಿಗೆ ಹೈಕೋರ್ಟ್‌ನ ಈ ಆದೇಶವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.





