ಸೌದಿ ಸರಕಾರವನ್ನು ಶಿಕ್ಷಿಸಿ: ಮುಸ್ಲಿಮ್ ಜಗತ್ತಿಗೆ ಇರಾನ್ ಅಧ್ಯಕ್ಷರ ಕರೆ

ಟೆಹರಾನ್ (ಇರಾನ್), ಸೆ. 7: ಹಜ್ ಯಾತ್ರೆಯನ್ನು ನಿಭಾಯಿಸುತ್ತಿರುವ ರೀತಿಗಾಗಿ ಹಾಗೂ ಈ ವಲಯದಲ್ಲಿನ ಕೃತ್ಯಗಳಿಗಾಗಿ ಸೌದಿ ಅರೇಬಿಯ ಸರಕಾರವನ್ನು ಶಿಕ್ಷಿಸುವಂತೆ ಇರಾನ್ ಅಧ್ಯಕ್ಷ ಹಸನ್ ರೂಹಾನಿ ಬುಧವಾರ ಮುಸ್ಲಿಮ್ ಜಗತ್ತಿಗೆ ಕರೆ ನೀಡಿದ್ದಾರೆ.
‘‘ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಸೌದಿ ಸರಕಾರವನ್ನು ಶಿಕ್ಷಿಸಲು ಈ ವಲಯದ ದೇಶಗಳು ಮತ್ತು ಇಸ್ಲಾಮ್ ಜಗತ್ತು ಸಂಘಟಿತ ಪ್ರಯತ್ನಗಳನ್ನು ನಡೆಸಬೇಕು’’ ಎಂದು ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಇರಾನ್ ನಾಯಕ ಹೇಳಿದರು ಎಂದು ಸರಕಾರಿ ಸುದ್ದಿ ಸಂಸ್ಥೆ ಇರ್ನ ವರದಿ ಮಾಡಿದೆ.
‘‘ಸೌದಿ ಸರಕಾರದೊಂದಿಗೆ ನಾವು ಹೊಂದಿರುವ ಸಮಸ್ಯೆಗಳು ಕೇವಲ ಹಜ್‌ಗೆ ಸಂಬಂಧಪಟ್ಟಿದ್ದೇ ಆಗಿದ್ದಲ್ಲಿ, ಅದಕ್ಕೊಂದು ಪರಿಹಾರ ಕಂಡುಕೊಳ್ಳಲು ಬಹುಶಃ ಸಾಧ್ಯವಾಗುತ್ತಿತ್ತು’’ ಎಂದರು.
‘‘ಆದರೆ, ದುರದೃಷ್ಟವಶಾತ್, ಈ ಸರಕಾರ ಈ ವಲಯದಲ್ಲಿ ಅಪರಾಧಗಳನ್ನು ನಡೆಸುತ್ತಿದೆ, ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಹಾಗೂ ವಾಸ್ತವವಾಗಿ ಇರಾಕ್, ಸಿರಿಯ ಮತ್ತು ಯಮನ್‌ಗಳಲ್ಲಿ ಮುಸ್ಲಿಮರ ರಕ್ತ ಹರಿಸುತ್ತಿದೆ’’ ಎಂದು ಆರೋಪಿಸಿದರು.
ಶನಿವಾರ ವಾರ್ಷಿಕ ಹಜ್ ಯಾತ್ರೆ ಆರಂಭಗೊಳ್ಳುವುದಕ್ಕೆ ಪೂರ್ವಭಾವಿಯಾಗಿ ಈ ಎರಡು ಪ್ರಾದೇಶಿಕ ಎದುರಾಳಿಗಳು ಪರಸ್ಪರ ಹಲ್ಲು ಮಸೆಯುತ್ತಿದ್ದು, ಅವುಗಳ ನಡುವಿನ ಸಂಬಂಧ ಈಗಾಗಲೇ ತಳಕ್ಕಿಳಿದಿದೆ.
ಹಜ್‌ಗೆ ಒದಗಿಸಲಾಗುವ ಭದ್ರತೆ ಮತ್ತು ಸೌಕರ್ಯಗಳ ವಿಚಾರದಲ್ಲಿ ಇರಾನ್ ಮತ್ತು ಸೌದಿ ಅರೇಬಿಯಗಳ ನಡುವೆ ಮೇ ತಿಂಗಳಲ್ಲಿ ನಡೆದ ಮಾತುಕತೆ ಮುರಿದು ಬಿದ್ದಿರುವುದನ್ನು ಸ್ಮರಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ, ತನ್ನ ಪ್ರಜೆಗಳು ಹಜ್‌ಗೆ ಹೋಗುವುದನ್ನು ಇರಾನ್ ನಿಷೇಧಿಸಿದೆ.







