ಭಾರತೀಯ ರಾಯಭಾರಿಗೆ ಅವಮಾನ
ಪಾಕಿಸ್ತಾನಿ ರಾಯಭಾರಿಗೆ ಸಮನ್ಸ್

ಹೊಸದಿಲ್ಲಿ, ಸೆ.7: ಭಾರತವಿಂದು ಇಲ್ಲಿ ಪಾಕಿಸ್ತಾನಿ ರಾಯಭಾರಿ ಅಬ್ದುಲ್ ಬಾಸಿತ್‌ರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಿ, ಪಾಕಿಸ್ತಾನದ ಭಾರತೀಯ ರಾಯಭಾರಿ ಗೌತಂ ಬಂಬಾವಾಲೆಯವರಿಗೆ ಅಸೌಜನ್ಯ ತೋರಿಸಿದುದರ ಕುರಿತು ಪ್ರಬಲ ಪ್ರತಿಭಟನೆ ದಾಖಲಿಸಿವೆ.
ಪಾಕಿಸ್ತಾನಿ ರಾಯಭಾರಿ ಅಬ್ದುಲ್ ಬಾಸಿತ್‌ರಿಗೆ ಸಮನ್ಸ್ ಕಳುಹಿಸಿ ಅವರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಲಾಯಿತು. ಭಾರತೀಯ ರಾಯಭಾರಿಗೆ ಅಸೌಜನ್ಯ ತೋರಿಸಿದ ಕುರಿತಾಗಿ ಕಾರ್ಯದರ್ಶಿ (ಪಶ್ಚಿಮ) ಸುಜಾತಾ ಮೆಹ್ತಾ, ಭಾರತ ಸರಕಾರದ ಕಳವಳವನ್ನು ಅವರಿಗೆ ತಿಳಿಸಿದರೆಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದರು.
ಕರಾಚಿ ಛೇಂಬರ್ ಆಫ್ ಕಾಮರ್ಸ್ ಕಾರ್ಯಕ್ರಮವೊಂದಕ್ಕೆ ಬಂಬಾವಾಲೆಯವರನ್ನು ಎರಡು ವಾರಗಳ ಹಿಂದೆಯೇ ಆಹ್ವಾನಿಸಿತ್ತು. ಆಹ್ವಾನವನ್ನು ಅಂಗೀಕರಿಸಿದ್ದ ಅವರು, ಕಾರ್ಯಕ್ರಮದಲ್ಲಿ ಭಾಷಣ ಮಾಡಲು ಒಪ್ಪಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದುಪಡಿಸುವ ಮೂಲಕ ಬಂಬಾವಾಲೆಯವರನ್ನು ಅವಮಾನಿಸಲಾಗಿತ್ತು.
ಪಾಕಿಸ್ತಾನದಲ್ಲಿರುವ ಭಾರತದ ಅಧಿಕೃತ ರಾಜತಂತ್ರಜ್ಞರಿಗೆ ಸಾಮಾನ್ಯ ಕೆಲಸ ಕಾರ್ಯಗಳನ್ನು ಅಡ್ಡಿಯಿಲ್ಲದೆ ನಡೆಸಲು ಅವಕಾಶ ನೀಡಲಾಗುವುದೆಂಬ ಆಶಾಭಾವನೆಯನ್ನೂ ಬಾಸಿತ್‌ರಿಗೆ ತಿಳಿಸಲಾಯಿತೆಂದು ವಿಕಾಸ್ ಸ್ವರೂಪ್ ಹೇಳಿದರು.
ಜನವರಿಯಲ್ಲಿ ಪಾಕಿಸ್ತಾನದ ರಾಯಭಾರಿಯಾಗಿ ನಿಯೋಜಿತರಾಗಿದ್ದ ಬಂಬಾವಾಲೆ, ಕರಾಚಿಗೆ ಮೊದಲ ಭೇಟಿ ನೀಡಲಿದ್ದರು. ಆದರೆ, ಯಾವುದೇ ಕಾರಣ ನೀಡದೆ ಅರ್ಧ ತಾಸಿಗೆ ಮೊದಲು ಅಲ್ಲಿನ ಛೇಂಬರ್ ಆಫ್ ಕಾಮರ್ಸ್ ನಿಗದಿಯಾಗಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು.
ಆದಾಗ್ಯೂ, ಭಾರತದ ಆಂತರಿಕ ವಿಷಯವಾಗಿರುವ ಕಾಶ್ಮೀರದ ಕುರಿತು ಪಾಕಿಸ್ತಾನದ ಹಸ್ತಕ್ಷೇಪದ ಕುರಿತು ಬಂಬಾವಾಲೆ ಸೋಮವಾರ ಟೀಕಿಸಿದ್ದುದು, ಪಾಕಿಸ್ತಾನಿ ಅಧಿಕಾರಿಗಳನ್ನು ಇರಿಸುಮುರಿಸುಗೊಳಿಸಿದ್ದುದೇ ಕಾರ್ಯಕ್ರಮ ರದ್ದುಗೊಳಿಸಲು ಕಾರಣವೆಂದು ಭಾರತದ ಅಧಿಕಾರಿಗಳು ತರ್ಕಿಸಿದ್ದಾರೆ.





