ಪ್ರಗ್ಯಾನ್ ಓಜಾ ತಲೆಗೆ ಅಪ್ಪಳಿಸಿದ ಚೆಂಡು; ಅಪಾಯದಿಂದ ಪಾರು

ಗ್ರೇಟರ್‌ನೊಯ್ಡ, ಸೆ.7: ಇಂಡಿಯಾ ಬ್ಲೂ ತಂಡದ ವಿರುದ್ಧದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಫೀಲ್ಡಿಂಗ್ ನಿರತರಾಗಿದ್ದ ಇಂಡಿಯಾ ಗ್ರೀನ್ ತಂಡದ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾಗೆ ಪಿಂಕ್ ಚೆಂಡು ಬಡಿದು ಕೆಲ ಕಾಲ ಆತಂಕವನ್ನು ಸೃಷ್ಟಿಸಿತು.
ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಇಂಡಿಯಾ ಬ್ಲೂ ತಂಡದ ಬಾಲಂಗೋಚಿ ಪಂಕಜ್ ಸಿಂಗ್ ಆಫ್ ಸ್ಪಿನ್ನರ್ ಜಲಜ್ ಸಕ್ಸೇನಾರ ಎಸೆತವನ್ನು ಬಾರಿಸಿದಾಗ ಮಿಡ್‌ಆನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಓಜಾರ ತಲೆಗೆ ತಾಗಿದೆ. ಆಗ ಅವರು ಮೈದಾನದಲ್ಲಿ ಕುಸಿದುಬಿದ್ದರು. ಮೈದಾನದಲ್ಲಿದ್ದ ಆಟಗಾರರು ಕೆಲ ಕಾಲ ಆತಂಕದ ಕ್ಷಣ ಎದುರಿಸಿದರು.
ಓಜಾರನ್ನು ಅರೆಪ್ರಜ್ಞಾಸ್ಥಿತಿಯಲ್ಲಿ ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು. ಇಂಡಿಯಾ ಗ್ರೀನ್ ಕೋಚ್ ಡಬ್ಲುವಿ ರಾಮನ್ ಅವರು ಓಜಾರನ್ನು ಆಸ್ಪತ್ರೆಗೆ ದಾಖಲಿಸಿದರು. ಆ್ಯಂಬುಲೆನ್ಸ್‌ನ ಒಳಗೆ ಓಜಾ ಎಲ್ಲರೊಂದಿಗೆ ಮಾತನಾಡುತ್ತಿದ್ದರು. ಅವರ ಪರಿಸ್ಥಿತಿ ಸ್ಥಿರವಾಗಿದೆ. ಎಂಆರ್‌ಐ ಸ್ಕಾನಿಂಗ್ ನಡೆಸಲಾಗಿದ್ದು, ವರದಿಯಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಅವರು ಎಲ್ಲರೊಂದಿಗೆ ಮಾತನಾಡುತ್ತಿದ್ದಾರೆ. ಅವರು ಇನ್ನು ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.







