ಜ್ವಲಂತ ಸಮಸ್ಯೆ ನಿವಾರಣೆಗೆ ಉಸ್ತುವಾರಿ ಸಚಿವರಿಗೆ ಮನವಿ

ಚಿಕ್ಕಮಗಳೂರು, ಸೆ.7: ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ನೇತೃತ್ವದ ಜಿಪಂ ಕಾಂಗ್ರೆಸ್ ಸದಸ್ಯರ ನಿಯೋಗ ಬುಧವಾರ ಬೆಂಗಳೂರಿನಲ್ಲಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ಅವರಿಗೆ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ನಿವಾರಿಸುವಂತೆ ಮನವಿ ಸಲ್ಲಿಸಿತು. ಗೃಹ ಕಚೇರಿಯಲ್ಲಿ ಸಚಿವರನ್ನು ಭೇಟಿ ಮಾಡಿದ ಸದಸ್ಯರು, ವಾಡಿಕೆ ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಈ ಬಾರಿ ಬರಗಾಲದ ಪರಿಸ್ಥಿತಿ ಎದುರಾಗಿದ್ದು ಈ ಹಿನ್ನೆಲೆಯಲ್ಲಿ ಜನ, ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ತುರ್ತುಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಆದಷ್ಟು ಶೀಘ್ರ ನಿವಾರಿಸಬೇಕು ಜಿಪಂ ಸದಸ್ಯರಿಗೆ ಕ್ಷೇತ್ರದ ಅಭಿವೃದ್ಧಿ ಮಾಡಲು ಅನುಕೂಲವಾಗುವಂತೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಸಚಿವ ಡಾ. ಜಿ.ಪರಮೇಶ್ವರ್, ಸಮಸ್ಯೆಗಳನ್ನು ಅರಿಯಲು ಸದ್ಯದಲ್ಲೇ ಜಿಲ್ಲೆಯ ಪ್ರತೀ ತಾಲೂಕಿಗೂ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು ಎಂದು ಗಾಯತ್ರಿ ಶಾಂತೇಗೌಡ ತಿಳಿಸಿದ್ದಾರೆ.
ಈ ವೇಳೆ ಜಿಲ್ಲಾ ಪಂಚಾಯತ್ ಕಾಂಗ್ರೆಸ್ ಸದಸ್ಯರಾದ ಸದಾಶಿವ, ವನಮಾಲಾ ದೇವರಾಜ್, ಲೋಲಾಕ್ಷಿ, ಪ್ರೇಮಾ ಕೆ.ವಿ. ಮಂಜುನಾಥ್ ಮಹೇಶ್ ಒಡೆಯರ್, ಪ್ರಭಾಕರ್, ಶರತ್ ಕೃಷ್ಣಮೂರ್ತಿ, ಲಕ್ಕಮ್ಮ ಸಿದ್ದಪ್ಪ, ರೇಣುಕಾ ನಟರಾಜ್, ರಾಧಾ ಶಿವಣ್ಣ, ಚಂದ್ರಮ್ಮ, ಶಕುಂತಲಮ್ಮ ಮತ್ತಿತರರು ಉಪಸ್ಥಿತರಿದ್ದರು.







