ನಾಳೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
ಮಡಿಕೇರಿ ನಗರಸಭೆ

ಮಡಿಕೇರಿ, ಸೆ.7: ನಗರಸಭೆೆಯ ಎರಡನೆ ಅವಧಿಯ ಅಧಿಕಾರಕ್ಕಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೆ. 9ರಂದು ಚುನಾವಣೆ ನಡೆಯಲಿದೆ. ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿರುವಂತೆಯೇ ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಎದುರಾಗಿದೆ. ಆದರೆ ಈ ಹಿಂದೆ ಅಧ್ಯಕ್ಷರಾಗಿದ್ದ ಜುಲೇಕಾಬಿ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಪಕ್ಷದಲ್ಲಿರುವ ಆರು ಮಂದಿ ಮಹಿಳಾ ಸದಸ್ಯರು ಕೂಡ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿದ್ದಾರೆ. ಹಿರಿಯ ಸದಸ್ಯರು ಹಾಗೂ ನಗರಸಭೆಯ ಮಾಜಿ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ಮೊದಲ ಸ್ಥಾನದಲ್ಲಿದ್ದಾರೆ. ಆದರೆ ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಜುಲೇಕಾಬಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುವ ಕುರಿತು ಕಾಂಗ್ರೆಸ್ ವರಿಷ್ಠರು ಚಿಂತನೆ ನಡೆಸಿದ್ದಾರೆ. ಇತ್ತೀಚೆಗೆ ಜುಲೇಕಾಬಿ ಹಾಗೂ ಕಾವೇರಮ್ಮ ಸೋಮಣ್ಣ ಅವರನ್ನು ಬೆಂಗಳೂರಿಗೆ ಕರೆಯಿಸಿಕೊಂಡಿದ್ದ ವರಿಷ್ಠರು ಸೆ. 9ರಂದು ನಡೆಯುವ ಚುನಾವಣೆಗೆ ಸಿದ್ಧರಾಗಿರುವಂತೆ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸದಸ್ಯರಾದ ತಜಸುಂ ಹಾಗೂ ವೀಣಾಕ್ಷಿ ಕೂಡ ಸ್ಪರ್ಧೆಯಲ್ಲಿದ್ದಾರೆ. ಪ್ರಸ್ತುತ ಅಧ್ಯಕ್ಷರಾಗಿರುವ ಶ್ರೀಮತಿ ಬಂಗೇರ ಅವರು ತಮ್ಮನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಬೇಕೆಂದು ವರಿಷ್ಠರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಒತ್ತಡ ಹೇರುತ್ತಿದ್ದು, ಉಸ್ತುವಾರಿ ಸಚಿವರ ಅಭಯ ದೊರೆತಿದೆ ಎಂದು ತಿಳಿದು ಬಂದಿದೆ.
ಉಪಾಧ್ಯಕ್ಷ ಸ್ಥಾನ ಪ್ರಕಾಶ್ ಆಚಾರ್ಯಗೆ ಖಚಿತ: ಸಾಮಾನ್ಯಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ನ ಹಿರಿಯ ಸದಸ್ಯ ಕೆ.ಎಂ. ಗಣೇಶ್ ತಿರಸ್ಕರಿಸಿರುವ ಕಾರಣದಿಂದ ಸದಸ್ಯ ಪ್ರಕಾಶ್ ಆಚಾರ್ಯ ಅವರಿಗೆ ಉಪಾಧ್ಯಕ್ಷ ಸ್ಥಾನ ದೊರಕುವುದು ಖಚಿತವೆಂದು ಹೇಳಲಾಗುತ್ತಿದೆ.
ಕೈ ಎತ್ತುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
: ಸೆ. 9ರಂದು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು,ಬೆಳಗ್ಗೆ 9 ರಿಂದ 11 ಗಂಟೆಯವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. 11 ರಿಂದ 11:30 ರವರೆಗೆ ನಾಮಪತ್ರಗಳ ಪರಿಶೀಲನೆ ಮತ್ತು ಕ್ರಮಬದ್ಧ ನಾಮಪತ್ರಗಳ ಪಟ್ಟಿ ಪ್ರಕಟಿಸುವುದು. 11:30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಅವಕಾಶವಿದೆ. ಅಗತ್ಯವಿದ್ದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಕೈ ಎತ್ತುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯನ್ನು ನಡೆಸಲಾಗುವುದೆಂದು ಚುನಾವಣಾಧಿಕಾರಿ ನಂಜುಂಡೇಗೌಡ ತಿಳಿಸಿದ್ದಾರೆ.
ಈ ಸಂಬಂಧ ಸೆ. 9ರಂದು 12 ಗಂಟೆಗೆ ನಗರಸಭಾ ಸದಸ್ಯರ ವಿಶೇಷ ಸಭೆಯನ್ನು ನಗರಸಭಾ ಕೌನ್ಸಿಲ್ ಹಾಲ್‌ನಲ್ಲಿ ಕರೆಯಲಾಗಿದೆ.
ಇಂದು ಬೆಂಗಳೂರಿನಲ್ಲಿ ಅಭ್ಯರ್ಥಿಗಳ ಆಯ್ಕೆ
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳ ಆಯ್ಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಅವರು ಸೆ.8ರಂದು ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಅಂತಿಮಗೊಳಿಸಲಿದ್ದಾರೆ. ನಗರಸಭೆಯ ಕಾಂಗ್ರೆಸ್ ಸದಸ್ಯರು ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಮುಖರ ವಿಶೇಷ ಸಭೆಯನ್ನು ನಡೆಸಲಿರುವ ಸಚಿವರು ನಗರಸಭೆಯ ಅಧಿಕಾರ ಕಾಂಗ್ರೆಸ್‌ನ ಕೈತಪ್ಪಿ ಹೋಗದಂತೆ, ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಒಮ್ಮತದಿಂದ ಬೆಂಬಲಿಸುವಂತೆ ಸೂಚನೆ ನೀಡಲಿದ್ದಾರೆ. ಅಲ್ಲದೆ, ಇದೇ ಸಂದರ್ಭ ವಿಪ್ ಜಾರಿ ಮಾಡುವ ಸಾಧ್ಯತೆಗಳೂ ಇವೆೆ. ಗುರುವಾರದ ಸಭೆಯಲ್ಲಿ ಅಭ್ಯರ್ಥಿಗಳು ಆಯ್ಕೆಯಾದ ನಂತರ ಸಂಜೆ ಗುಪ್ತಸ್ಥಳಕ್ಕೆ ತೆರಳಲಿರುವ ಸದಸ್ಯರು ಸೆ.9ರಂದು ಚುನಾವಣೆ ಸಂದಭರ್ ಮಡಿಕೇರಿಗೆ ಆಗಮಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿವೆ.







