ಡಿಸಿಸಿ ಬ್ಯಾಂಕನ್ನು ಸದೃಢಗೊಳಿಸಲು ಹೆಚ್ಚಿನ ಠೇವಣಿ ಅಗತ್ಯ: ಗಾಣಗಿ

ಚಿಕ್ಕಮಗಳೂರು, ಸೆ.7: ಡಿಸಿಸಿ ಬ್ಯಾಂಕನ್ನು ಆರ್ಥಿಕವಾಗಿ ಮತ್ತಷ್ಟು ಸದೃಢಗೊಳಿಸಲು ಇನ್ನೂ ಹೆಚ್ಚಿನ ಠೇವಣಿ ಸಂಗ್ರಹಿಸಬೇಕೆಂದು ನಬಾರ್ಡಿನ ಕರ್ನಾಟಕ ಪ್ರಾಂತೀಯ ಕಚೇರಿಯ ಪ್ರಧಾನ ವ್ಯವಸ್ಥಾಪಕ ಐ.ಎಂ.ಗಾಣಗಿ ತಿಳಿಸಿದ್ದಾರೆ.
ಅವರು ಬುಧವಾರ ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದರು. ಬ್ಯಾಂಕ್ ಸತತ 3 ವರ್ಷಗಳಿಂದ ಲಾಭದಲ್ಲಿದ್ದು, ಎನ್‌ಪಿಎ ಪ್ರಮಾಣ ಕಡಿಮೆಗೊಳಿಸಿರುವುದು ಅಭಿನಂದನಾರ್ಹ. ಬ್ಯಾಂಕ್‌ಗೆ ಸ್ವಸಹಾಯ ಗುಂಪುಗಳ ಸಾಲ ಜೋಡಣೆಯಲ್ಲಿ ಎರಡು ಪ್ರಶಸ್ತಿಗಳು ನಬಾರ್ಡ್‌ನಿಂದ ಲಭಿಸಿದ್ದು ಮಾತ್ರವಲ್ಲದೆ, ಉತ್ತಮ ಬಿ ವರ್ಗದ ಬ್ಯಾಂಕ್ ಎಂದು ಅಪೆಕ್ಸ್ ಬ್ಯಾಂಕ್‌ನಿಂದ ಪ್ರಶಸ್ತಿ ಪಡೆದಿರುವುದಕ್ಕೆ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಉತ್ತಮ ಕಾರ್ಯವೈಖರಿ ಕಾರಣವೆಂದರು.
ಮಧ್ಯಮಾವಧಿ ಸಾಲ ವಿತರಣೆ ವಿಶೇಷವಾಗಿ ಡೈರಿ ಯೋಜನೆಗೆ ರಾಜ್ಯ ಸರಕಾರದ ಶೇ.3 ರ ಬಡ್ಡಿದರದ ಯೋಜನೆಯಡಿ ಸಾಲ ನೀಡಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಜಿಲ್ಲೆಯಲ್ಲಿ 280 ಹಾಲಿನ ಡೈರಿಗಳಿದ್ದು, ಹಾಲಿನ ಡೈರಿಗಳಿಗೆ ರಾಜ್ಯ ಸರಕಾರದ ಶೇ.3ರ ಬಡ್ಡಿದರದ ಯೋಜನೆಯಡಿ ಸಾಲ ನೀಡುವ ಮೂಲಕ ಬ್ಯಾಂಕ್‌ಮಧ್ಯಮಾವಧಿ ಸಾಲ ನೀಡಿಕೆಯ ಗುರಿ ಸಾಧಿಸಲು ಸಲಹೆ ನೀಡಿದರು. ಬ್ಯಾಂಕ್‌ನ ಅಧ್ಯಕ್ಷ ಎಸ್.ಎಲ್. ಧರ್ಮೇಗೌಡ ಅವರು ಗಾಣಗಿ ಅವರನ್ನು ಅಭಿನಂದಿಸಿದ ಬಳಿಕ ಮಾತನಾಡಿ, ನಬಾರ್ಡ್ ಅಧಿಕಾರಿಗಳು ನೀಡಿದ ಸೂಚನೆಯಂತೆ ವಸೂಲಾತಿ ಸೇರಿದಂತೆ ಎಲ್ಲಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದ ಅವರು, ನಬಾರ್ಡ್ ಬ್ಯಾಂಕ್‌ಗೆ ನೀಡುತ್ತಿರುವ ಅಲ್ಪಾವಧಿ ಸಾಲದ ಪುನರ್ಧನ 2013-14 ನೆ ಸಾಲಿನಲ್ಲಿ ಶೇ. 60ರಷ್ಟು ಇದ್ದು, ತದನಂತರದ ಸಾಲುಗಳಲ್ಲಿ ಇದರ ಪ್ರಮಾಣವನ್ನು ಶೇ. 50, ಶೇ. 45 ಕ್ಕೆ ಕಡಿಮೆಗೊಳಿಸಿದ್ದು, 2016-17 ನೆ ಸಾಲಿನಲ್ಲಿ ಶೇ. 40 ಕ್ಕೆ ಕಡಿಮೆಗೊಳಿಸಿದೆ. ಇದರಿಂದ ಹೊಸ ರೈತರಿಗೆ ಸಾಲ ನೀಡಲು ತೊಂದರೆಯಾಗಿದೆ. ಇದರ ಬಗ್ಗೆ ಪರಿಶೀಲಿಸಿ ಬ್ಯಾಂಕಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವಂತೆ ಕೋರಿದರು.
ಒಂಬತ್ತು ಹೊಸ ಶಾಖೆಗಳನ್ನು ತೆರೆಯುವ ಪ್ರಸ್ತಾವನೆ ನಬಾರ್ಡ್ ಕಚೇರಿಯಲ್ಲಿ ಪರಿಶೀಲನಾ ಹಂತದಲ್ಲಿದ್ದು ಶೀಘ್ರವಾಗಿ ಮಂಜೂರಾತಿ ನೀಡುವಂತೆ ಧರ್ಮೇಗೌಡ ಅವರು ಕೋರಿದರು. ನಬಾರ್ಡ್ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಮಂಜೂರಾತಿ ನೀಡುವುದಾಗಿ ಭರವಸೆ ನೀಡಿದರು.
ನಬಾರ್ಡ್ ಜಿಲ್ಲಾ ವ್ಯವಸ್ಥಾಪಕರಾದ ಅನುರಾಧಾ ನರಹರಿ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಆರ್.ಜೆ. ಕಾಂತರಾಜು, ನಿರ್ದೇಶಕ ಟಿ.ಇ. ಮಂಜುನಾಥ್ ಮತ್ತಿತರರಿದ್ದರು.







