ನಮ್ಮ ಒಲಿಂಪಿಕ್ಸ್ ಯಶಸ್ಸಿಗೆ ಜನಾಂಗೀಯ ವೈವಿಧ್ಯತೆ ಕಾರಣ: ಒಬಾಮ

ಲುವಾಂಗ್ ಪ್ರಬಾಂಗ್ (ಲಾವೋಸ್), ಸೆ. 7: ಒಲಿಂಪಿಕ್ಸ್‌ನಲ್ಲಿ ಅಮೆರಿಕದ ಪ್ರಾಬಲ್ಯಕ್ಕೆ ದೇಶದ ಜನಾಂಗೀಯ ಮತ್ತು ಬುಡಕಟ್ಟು ವೈವಿಧ್ಯತೆಯೇ ಕಾರಣ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಬುಧವಾರ ಹೇಳಿದ್ದಾರೆ ಹಾಗೂ ಸಮ್ಮಿಳಿತ (ಇನ್‌ಕ್ಲುಸಿವ್) ಸಮಾಜಗಳನ್ನು ಬೆಂಬಲಿಸುವಂತೆ ಅವರು ಆಗ್ನೇಯ ಏಶ್ಯದ ಯುವ ಜನತೆಯನ್ನು ಒತ್ತಾಯಿಸಿದ್ದಾರೆ.
ಉತ್ತರ ಲಾವೋಸ್‌ನ ಲುವಾಂಗ್ ಪ್ರಬಾಂಗ್‌ನಲ್ಲಿ ನಡೆದ ಯುವ ಆಗ್ನೇಯ ಏಶ್ಯ ನಾಯಕರ ಸಮಾವೇಶದಲ್ಲಿ ಮಾತನಾಡಿದ ಒಬಾಮ, ಅಮೆರಿಕದ ‘‘ಪ್ರಬಲ ಶಕ್ತಿ’’ ಅದರ ವೈವಿಧ್ಯತೆಯಾಗಿದೆ ಎಂದರು.
ಆಗ್ನೇಯ ಏಶ್ಯದ ಕೆಲವು ದೇಶಗಳಲ್ಲಿ ಜನಾಂಗೀಯ ಉದ್ವಿಗ್ನತೆ ನೆಲೆಸಿರುವುದನ್ನು ಸ್ಮರಿಸಬಹುದಾಗಿದೆ.
‘‘ಅಮೆರಿಕದ ದೊಡ್ಡ ನಗರಗಳಲ್ಲಿ ನೀವು ಎಲ್ಲಿ ಬೇಕಾದರೂ ಉತ್ತಮ ಆಹಾರವನ್ನು ಪಡೆದುಕೊಳ್ಳಬಹುದು. ಇದರ ನಡುವೆ ಜನರು ಹೊಸ ಆಹಾರವನ್ನೂ ತಯಾರಿಸುತ್ತಾರೆ. ಅದು ವಿವಿಧ ಆಹಾರಗಳ ಮಿಶ್ರಣವಾಗಿರುತ್ತದೆ’’ ಎಂದು ಒಬಾಮ ನುಡಿದರು.
ರಿಯೋ ಡಿ ಜನೈರೊದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ಸ್‌ನಲ್ಲಿ ಅಮೆರಿಕ 46 ಚಿನ್ನದ ಪದಕಗಳನ್ನು ಪಡೆಯಲು ಒಂದು ಕಾರಣ ಜನಾಂಗೀಯ ವೈವಿಧ್ಯತೆ ಎಂದರು.
‘‘ಎಲ್ಲೆಡೆಗಳಿಂದ ಬಂದ ಜನರು ನಮ್ಮಲ್ಲಿದ್ದಾರೆ. ಪ್ರತಿ ಕ್ರೀಡೆಗೆ ಬೇಕಾದ ವಿವಿಧ ನಮೂನೆಯ ಜನರು ನಮ್ಮಲ್ಲಿದ್ದಾರೆ. ಬಾಸ್ಕೆಟ್‌ಬಾಲ್ ಅಥವಾ ಈಜಿಗೆ ಅಗತ್ಯವಾದ ಉದ್ದದ ಜನರು ನಮ್ಮಲ್ಲಿದ್ದಾರೆ. ಅದೇ ವೇಳೆ, ಜಿಮ್ನಾಸ್ಟಿಕ್ಸ್‌ಗೆ ಬೇಕಾದ ಚಿಕ್ಕ ಗಾತ್ರದ ಜನರೂ ನಮ್ಮಲ್ಲಿದ್ದಾರೆ’’ ಎಂದು ಒಬಾಮ ನುಡಿದರು.







