ರೈತರ ಸಾಲ ಮನ್ನಾಕ್ಕೆ ರಾಹುಲ್ ಆಗ್ರಹ
ಗೋರಖಪುರ(ಉ.ಪ್ರ.), ಸೆ.7: ಚುನಾವಣೆಯ ಹೊಸ್ತಿಲಲ್ಲಿರುವ ಉತ್ತರಪ್ರದೇಶ ಯಾತ್ರೆಯ ಎರಡನೆಯ ದಿನವಾದ ಇಂದು, ಕೃಷಿಸಾಲ ಮನ್ನಾಕ್ಕೆ ಪ್ರಬಲವಾಗಿ ಆಗ್ರಹಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ನರೇಂದ್ರ ಮೋದಿ ಸರಕಾರವು ಬಡವರಿಗಾಗಿ ಸರಕಾರ ನಡೆಸಬೇಕು ಹಾಗೂ ಅಳುತ್ತಿರುವ ರೈತರ ಬವಣೆಯತ್ತ ಕಣ್ಣು ಹಾಯಿಸಬೇಕು ಎಂದಿದ್ದಾರೆ.
ಕಳೆದೆರಡು ವರ್ಷಗಳಲ್ಲಿ ನರೇಂದ್ರ ಮೋದಿ ‘ದೊಡ್ಡ ಕೈಗಾರಿಕೋದ್ಯಮಿಗಳು ಹಾಗೂ ಶ್ರೀಮಂತರ ರೂ. 1.10 ಲಕ್ಷ ಕೋಟಿಯಷ್ಟು ಸಾಲಗಳನ್ನು ಮನ್ನಾ ಮಾಡಿದ್ದಾರೆ. ಆದರೆ ಇಡೀ ದೇಶದ ಭಾರ ಹೊರುತ್ತಿರುವ ರೈತರ ಬವಣೆಯನ್ನು ಅವರು ಮರೆತಿದ್ದಾರೆಂದು ರಾಹುಲ್ ಟೀಕಿಸಿದ್ದಾರೆ.
ಮೋದಿ ಪ್ರಧಾನಿಯಾಗಿರುವುದರಿಂದ ಅವರಿಗೆ ಆ ಅಧಿಕಾರವಿದೆ. ತಾವದನ್ನು ವಿರೋಧಿಸುವುದಿಲ್ಲ. ಆದರೆ ತಮ್ಮ ಬೇಡಿಕೆ ಒಂದೇ. ಅವರು ‘ಸೂಟು-ಬೂಟಿನ ಸರಕಾರ’ ನಡೆಸಬಾರದು. ಬಡವರಿಗಾಗಿ ಸರಕಾರ ನಡೆಸಬೇಕು. ಅವರು ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಲು ಬಯಸುತ್ತಾರಾದರೆ, ರೈತರ ಸಾಲವನ್ನೂ ಮನ್ನಾ ಮಾಡಲಿ. ಅವರು ರೈತರನ್ನು ಮರೆಯದಿರಲಿ. ಏಕೆಂದರೆ ರೈತ ಅಳುತ್ತಿದ್ದಾನೆ. ಆದರೆ ಉದ್ಯಮಿ ಅಳುತ್ತಿಲ್ಲ ಎಂದವರು ಪತ್ರಕರ್ತರೊಡನೆ ಹೇಳಿದ್ದಾರೆ. ನೀರಿನ ಅಭಾವ, ರಸಗೊಬ್ಬರ, ಸಾಲ, ಬೆಂಬಲ ಬೆಲೆ ಹಾಗೂ ವಿದ್ಯುತ್ ಸಮಸ್ಯೆಯಿಂದಾಗಿ ಹಲವು ರಾಜ್ಯಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವರದಿಗಳು ಬರುತ್ತಿವೆ. ಸರಕಾರವು ಹೊರೆಯನ್ನು ತನ್ನ ಹೆಗಲಿಗೆ ತೆಗೆದುಕೊಳ್ಳಬೇಕು. ದೊಡ್ಡ ಉದ್ಯಮಿಗಳಿಗೆ ಭಾರವೇನೂ ಇಲ್ಲ. ಆದರೆ, ರೈತರು ಇಡೀ ದೇಶದ ಭಾರವನ್ನು ತಮ್ಮ ಹೆಗಲುಗಳಲ್ಲಿ ಹೊರುತ್ತಿದ್ದಾರೆಂದು ತಮ್ಮ ‘ಖಾಟ್ ಸಭಾ’ಗಳಲ್ಲಿ ರೈತರು ತಿಳಿಸಿದ್ದಾರೆ. ಅದಕ್ಕಾಗಿ ತಾವೀ ಯಾತ್ರೆಯನ್ನು ಆರಂಭಿಸಿದ್ದೇವೆಂದು ರಾಹುಲ್ ಪ್ರತಿಪಾದಿಸಿದ್ದಾರೆ.
ಕಾಂಗ್ರೆಸ್ ಕೇಂದ್ರದಲ್ಲಾಗಲಿ, ರಾಜ್ಯದಲ್ಲಾಗಲಿ ಅಧಿಕಾರದಲ್ಲಿಲ್ಲ. ಆದುದರಿಂದ ರೈತರಿಗೆ ನೇರವಾಗಿ ನೆರವಾಗುವುದಕ್ಕೆ ಅದರಿಂದ ಸಾಧ್ಯವಿಲ್ಲ. ಆದರೆ ತಾವು ಚಳವಳಿಯ ಮೂಲಕ ಅವರ ಧ್ವನಿಯೆತ್ತುತ್ತಿದ್ದೇವೆಂದು ಅವರು ಹೇಳಿದ್ದಾರೆ.







