ವಿಮಾನ ನಿಲ್ದಾಣದಲ್ಲಿ ಭದ್ರತಾ ಸಂಕಟ ತಂದಿಟ್ಟ ಕತ್ರಿನಾ, ಸಿದ್ಧಾರ್ಥ್
ನಿಯಮಗಳು ಜನಸಾಮಾನ್ಯರಿಗೆ ಮಾತ್ರವೇ?
ಹೊಸದಿಲ್ಲಿ, ಸೆ.7: ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಖ್ಯಾತ ಬಾಲಿವುಡ್ ತಾರೆ ಕತ್ರಿನಾ ಕೈಫ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಅವರ ಚಿತ್ರ ಪ್ರಚಾರದ ಸ್ಟಂಟ್, ಭದ್ರತಾ ಆತಂಕಕ್ಕೆ ಕಾರಣವಾದ ಘಟನೆ ನಡೆದಿದೆ.
ಮುಖ್ಯ ಟರ್ಮಿನಲ್‌ನ ಟಿ-3 ಗೇಟ್ ಮೂಲಕ ವಿಮಾನದ ಟಿಕೆಟ್‌ನೊಂದಿಗೆ ಪ್ರವೇಶಿಸಿದ ಕೈಫ್-ಸಿದ್ಧಾರ್ಥ್ ಜೋಡಿ, ಡ್ಯೂಟಿ ಫ್ರೀ ಪ್ರದೇಶದಲ್ಲಿ ಪ್ರದರ್ಶನ ನೀಡಿದರು. ಅವರಿಗೆ ಬೋರ್ಡಿಂಗ್ ಪಾಸ್ ನೀಡಲಾಯಿತಾದರೂ ಅವರು ವಿಮಾನ ಏರಲಿಲ್ಲ. ಮುಂಬೈಗೆ ಹೊರಡಬೇಕಿದ್ದ ಏರ್‌ಇಂಡಿಯಾದ ಎಐ371 ವಿಮಾನದ ಬೋರ್ಡಿಂಗ್ ಪಾಸ್ ಅವರಿಗೆ ನೀಡಲಾಗಿತ್ತು. ವಿಮಾನ ಏರದೇ ಅವರು ನಿಲ್ದಾಣದಿಂದ ವಾಪಸ್ಸಾದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ತಾರೆಯರು ವಿಮಾನಯಾನ ಮಾಡುವುದಿಲ್ಲ ಎಂದಾಗಿದ್ದರೆ ಸಂದರ್ಶಕರ ಪ್ರವೇಶ ಪತ್ರ ಪಡೆದುಕೊಳ್ಳಬಹುದಿತ್ತು ಎಂದು ಸಿಐಎಸ್‌ಎಫ್ ಅಧಿಕಾರಿಗಳು ಹೇಳಿದ್ದಾರೆ. ವಿಮಾನ ಸಿಬ್ಬಂದಿಯನ್ನು ದಾರಿ ತಪ್ಪಿಸಿದ್ದಲ್ಲದೇ, ವಿಮಾನಯಾನಿಗಳಂತೆ ನಟಿಸಿ, ಅಧಿಕಾರಿಗಳನ್ನೂ ವಂಚಿಸಿದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ ವಿಮಾನಯಾನ ಮಾಡುವ ಉದ್ದೇಶವಿರಲಿಲ್ಲ. ಬದಲಾಗಿ ವಿಮಾನ ನಿಲ್ದಾಣದಲ್ಲಿ ಪ್ರದರ್ಶನ ನೀಡುವುದೇ ಅವರ ಉದ್ದೇಶವಾಗಿತ್ತು. ವಿಮಾನದ ಬಳಿ ಹೋಗುವ ಬದಲು ಅವರು ಡ್ಯೂಟಿ ಫ್ರೀ ಪ್ರದೇಶಕ್ಕೆ ತೆರಳಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರದರ್ಶನ ಬಳಿಕ ಇವರು ಟಿ-3 ಗೇಟ್‌ನಿಂದ ನಿರ್ಗಮಿಸಲು ಮುಂದಾದಾಗ, ಭದ್ರತಾ ಸಿಬ್ಬಂದಿ ತಡೆದರು. ಯಾವುದೇ ಪ್ರಯಾಣಿಕರನ್ನು ವಿಮಾನ ಏರಲು ವಿಮಾನಯಾನ ಸಿಬ್ಬಂದಿ ತಡೆದ ಹೊರತಾಗಿ ಈ ಮಾರ್ಗದಿಂದ ಪ್ರಯಾಣಿಕರು ನಿರ್ಗಮಿಸುವಂತಿಲ್ಲ.
ಆದರೆ ಎಲ್ಲ ಸೂಚನೆಗಳನ್ನು ಪಾಲಿಸಿಯೇ ಈ ಪ್ರದರ್ಶನ ನೀಡಲಾಗಿದೆ ಎಂದು ಎಕ್ಸೆಲ್ ಎಂಟರ್‌ಟೈನ್‌ಮೆಂಟ್‌ನ ವಿಶಾಲ್ ರಾಮಚಾಂದ್‌ನಿ ಹೇಳಿದ್ದಾರೆ.







