ರೈತರ ಬೇಡಿಕೆಗೆ ಕಿವಿಯಾದ ಸಿಎಂ: ಬೆಳೆಗಳಿಗೆ ನೀರು ಬಿಡಲು ಸೂಚನೆ

ಬೆಂಗಳೂರು, ಸೆ.7: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ಮೂಲಕ ರೈತರ ಆಕ್ರೋಶಕ್ಕೆ ಗುರಿಯಾಗಿರುವ ರಾಜ್ಯ ಸರಕಾರವು, ಕಾವೇರಿ ಕೊಳ್ಳದ ರೈತರ ಬೆಳೆಗಳಿಗೆ ನೀರು ಬಿಡಲು ನಿರ್ಧರಿಸಿದೆ.
ಇಂದು ಬೆಳಗ್ಗೆ ನಡೆದ ಮಾಧ್ಯಮ ಸಂಪಾದಕರ ಸಭೆಯಲ್ಲಿಯೂ ಕಾವೇರಿ ತೀರ್ಪಿನಿಂದಾದ ಅನ್ಯಾಯದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕದ ರೈತರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.
ಕಾವೇರಿ ನೀರು ಅವಲಂಬಿತ ರೈತರು 2.92 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಯುತ್ತಿರುವ ಬೆಳೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಕಾವೇರಿ ಕೊಳ್ಳದ ರೈತರ ಬೆಳೆಗಳಿಗೆ ನೀರು ಬಿಡುಗಡೆಯ ಸಂಬಂಧ ನೀರಾವರಿ ಸಲಹಾ ಸಮಿತಿಯಲ್ಲಿ ತೀರ್ಮಾನ ಕೈಗೊಂಡು ನೀರು ಬಿಡುಗಡೆ ಮಾಡುವಂತೆ ಜಲಸಂಪನ್ಮೂಲ ಇಲಾಖೆಯ ಅಧಿಕಾರಿ ಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ರೈತರು ಬೆಳೆಯುತ್ತಿರುವ ಬೆಳೆಗಳಿಗೆ ನೀರು ಹರಿಸಬೇಕು. ಅಲ್ಲದೆ, ಕಾವೇರಿ ಅವಲಂಬಿತರಿಗೆ ಕುಡಿಯುವ ನೀರು ಪೂರೈಕೆ ಆಗಬೇಕು. ರೈತರ ಬೆಳೆಗಳಿಗೆ ನಿಗದಿಯಂತೆ 10 ದಿನಗಳ ಕಾಲ ಕಾವೇರಿ ನೀರು ಒದಗಿಸಬೇಕೆಂದು ರೈತರ ಪರವಾಗಿ ಈಗಾಗಲೇ ಶಾಸಕ ಪುಟ್ಟಣ್ಣಯ್ಯ ಮುಖ್ಯಮಂತ್ರಿಗೆ ಮನವಿ ಮಾಡಿದ್ದರು.







