ನೀರು ಬಿಟ್ಟ ಸರಕಾರ: ನಾಳೆ ಕರ್ನಾಟಕ ಬಂದ್
ಕಾವೇರಿ ತೀರ್ಪಿಗೆ ತೀವ್ರ ವಿರೋಧ; ಹೆಚು್ಚತ್ತಿರುವ ಪ್ರತಿಭಟನೆ ಕಾವು

ತಮಿಳುನಾಡಿಗೆ ಕಾವೇರಿ ನೀರು ಬಿಟ್ಟ ಸರಕಾರದ ಕ್ರಮವನ್ನು ಖಂಡಿಸಿ ಮಂಡ್ಯ ಜಿಲ್ಲೆಯಲ್ಲಿ ರೈತರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.
ಬೆಂಗಳೂರು, ಸೆ.7: ಸುಪ್ರೀಂ ಕೋರ್ಟ್ ತೀರ್ಪಿನಂತೆ ತಮಿಳುನಾಡಿಗೆ ರಾಜ್ಯ ಸರಕಾರ ನೀರು ಹರಿಸಿರುವ ಧೋರಣೆಯನ್ನು ಖಂಡಿಸಿ ಇಂದು ನಗರದಲ್ಲಿ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದವು.
ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ ರಾಜ್ಯ ಸರಕಾರ, ಸುಪ್ರೀಂ ಕೋರ್ಟ್, ಕಾವೇರಿ ನ್ಯಾಯಾಧಿಕರಣದ ರಾಜ್ಯ ಪರ ವಕೀಲ ಫಾಲಿ ನಾರಿಮನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಪತ್ರಿಭಟನಾ ನಿರತರು ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು.
ಅರೆ ಬೆತ್ತಲೆಯಾಗಿ ಉರುಳು ಸೇವೆ ಮಾಡಿ, ಕಪ್ಪು ಪಟ್ಟಿ ಮತ್ತು ಖಾಲಿ ಬಿಂದಿಗೆಗಳನ್ನು ಪ್ರದರ್ಶಿಸಿದರು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಹಾಗೂ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರ ಪ್ರತಿಕೃತಿಗಳಿಗೆ ಚಪ್ಪಲಿ ಹಾರಹಾಕಿ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ತಮಿಳು ಚಾನೆಲ್ಗಳು ಬಂದ್ ಆಗಬೇಕು. ತಮಿಳು ಚಿತ್ರ ಪ್ರದರ್ಶನ ನಿಷೇಧಿಸಬೇಕು. ತಮಿಳುನಾಡಿನಿಂದ ಬರುವ ಹಾಲು ಹಾಗೂ ಇತರೆ ಪದಾರ್ಥಗಳನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.
ರಾತ್ರೋ ರಾತ್ರಿ ಕಾವೇರಿ ನದಿಗೆ ನೀರು ಬಿಟ್ಟು ರಾಜ್ಯದ ಹಿತವನ್ನೇ ಬಲಿ ಕೊಡಲಾಗುತ್ತಿದೆ. ಕೂಡಲೇ ಸಚಿವ ಎಂ.ಬಿ. ಪಾಟೀಲ್ ರಾಜೀನಾಮೆ ನೀಡಬೇಕು. ಜತೆಗೆ ರಾಜ್ಯದಿಂದ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ಸ್ಥಗಿತಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಶಿವರಾಮೇಗೌಡ ಮಾತನಾಡಿ, ಕಾವೇರಿ ವಿಷಯದಲ್ಲಿ ರಾಜ್ಯ ಪದೇ ಪದೇ ಸೋಲು ಅನುಭವಿಸುತ್ತಿದೆ. ನಮ್ಮಲ್ಲಿ ಬುದ್ದಿವಂತ ವಕೀಲರ ಕೊರತೆಯಿಂದ ಕಾವೇರಿ ವಿಚಾರದಲ್ಲಿ ಹಿನ್ನಡೆಯಾಗುತ್ತಿದೆ. ಕಾವೇರಿ ನೀರನ್ನು ಉಳಿಸಿಕೊಳ್ಳುವಲ್ಲಿ ಸರಕಾರ ವಿಫಲವಾಗಿದೆ. ನಮ್ಮದು ಅಯೋಗ್ಯ ಸರಕಾರ, ವಂಚಕ ಸರಕಾರವೆಂದು ಕಿಡಿಕಾರಿದರು.
ನೀರಾವರಿ ಸಚಿವ ನೈತಿಕ ಹೊಣೆ ಹೊತ್ತು ಎಂ.ಬಿ.ಪಾಟಿಲ್ ಕೂಡಲೇ ರಾಜೀನಾಮೆ ಕೊಡಬೇಕು. ನಮಗೆ ಕುಡಿಯೋಕೆ ನೀರಿಲ್ಲ , ಇಂತಹ ಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಬಿಡಬೇಕು ಎಂದು ಕರ್ನಾಟಕಕ್ಕೆ ನೀಡಿರುವ ಸುಪ್ರೀಂ ಕೋರ್ಟ್ ಆದೇಶ ಅವೈಜ್ಞಾನಿಕವಾದದ್ದು. ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.
ಬಂದ್ಗೆ ಸರಕಾರದ ಅಡ್ಡಿಯಿಲ್ಲ: ಪರಮೇಶ್ವರ್
ಬೆಂಗಳೂರು, ಸೆ.7: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಸೆ.9ರಂದು ಕರೆ ನೀಡಿರುವ ರಾಜ್ಯಬಂದ್ಗೆ ಸರಕಾರ ಅಡ್ಡಿಪಡಿಸುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪರವಾಗಿರುವ ಸಂಘಟನೆಗಳು ತಮ್ಮ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಲು ಸೆ.9ರಂದು ರಾಜ್ಯಬಂದ್ಗೆ ಕರೆ ನೀಡಿವೆ. ಅದಕ್ಕೆ ಸರಕಾರ ಅಡ್ಡಿಪಡಿಸುವುದಿಲ್ಲ ಎಂದರು. ಪ್ರತಿಭಟನಾಕಾರರು ತಮ್ಮ ಹಕ್ಕನ್ನು ಮಂಡಿಸಲಿದ್ದಾರೆ. ಸುಪ್ರೀಂಕೋರ್ಟ್ಗೆ ನಮ್ಮ ನೋವಿನ ಧ್ವನಿ ತಲುಪಬೇಕಿದೆ. ಆದರೆ, ಪ್ರತಿಭಟನೆಗಳು ಶಾಂತಿಯುತವಾಗಿರಬೇಕು. ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡುವ ಮೂಲಕ ಕಾನೂನು ಕೈಗೆತ್ತಿಕೊಳ್ಳುವ ಕೆಲಸಕ್ಕೆ ಕೈ ಹಾಕಬಾರದು ಎಂದು ಪರಮೇಶ್ವರ್ ಮನವಿ ಮಾಡಿದರು.
ಕಾವೇರಿ ನದಿ ನೀರು ನಮ್ಮ ಬಳಕೆಗೇ ಸಾಕಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಹೇಳಿರುವಂತೆ ‘ಬದುಕಿ ಹಾಗೂ ಬದುಕಲು ಬಿಡಿ’ ಎಂಬ ಸಲಹೆಯನ್ನು ಅನುಸರಿಸುವುದು ಕಷ್ಟವಾಗಲಿದೆ. ಆದರೂ, ಅನಿವಾರ್ಯ ಪರಿಸ್ಥಿತಿಯಲ್ಲಿ ಸರಕಾರವು ತಮಿಳುನಾಡಿಗೆ ನೀರು ನೀಡಬೇಕಾಗಿದೆ ಎಂದು ಪರಮೇಶ್ವರ್ ಹೇಳಿದರು.
ಸುಪ್ರೀಂಕೋರ್ಟ್ನ ಆದೇಶ ಪಾಲನೆ ಮಾಡದೆ, ನಮಗೆ ಬೇರೆ ದಾರಿ ಇರಲಿಲ್ಲ. ಆದುದರಿಂದಲೇ, ತಮಿಳು ನಾಡಿಗೆ ನೀರು ಬಿಡಲು ರಾಜ್ಯ ಸರಕಾರವು ಸರ್ವ ಪಕ್ಷಗಳ ಮುಖಂಡರ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ ಎಂದು ಅವರು ಸಮರ್ಥಿಸಿಕೊಂಡರು.
ನಾಳೆ ತಮಿಳು ಟಿವಿ ಚಾನೆಲ್ಗಳ ಪ್ರಸಾರ ಸ್ಥಗಿತ
ಬೆಂಗಳೂರು, ಸೆ.7: ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ವಿರೋಧಿಸಿ ಕರೆಕೊಟ್ಟಿರುವ ಕರ್ನಾಟಕ ಬಂದ್ಗೆ ಕರ್ನಾಟಕ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ಬೆಂಬಲ ವ್ಯಕ್ತಪಡಿ ಸಿದ್ದು, ಸೆ.9ರಂದು ತಮಿಳು ಟಿವಿ ಚಾನೆಲ್ಗಳ ಪ್ರಸಾರ ಸ್ಥಗಿತ ಗೊಳಿಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಕೇಬಲ್ ಆಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು, ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಯಾವಾಗಲೂ ಅನ್ಯಾಯವಾಗುತ್ತಿದೆ. ನಮಗೆ ಕುಡಿಯಲು ನೀರಿಲ್ಲದಿದ್ದರೂ ತಮಿಳುನಾಡು ಸರಕಾರ ಕಾವೇರಿ ನೀರಿಗೆ ಬೇಡಿಕೆ ಇಟ್ಟಿರುವುದು ಸರಿಯಲ್ಲ. ಹೀಗಾಗಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್ಗೆ ಬೆಂಬಲಿಸುವುದಾಗಿ ತಿಳಿಸಿದರು.
ನಗರದಲ್ಲಿ ಬಿಗಿ ಭದ್ರತೆ
ಬೆಂಗಳೂರು, ಸೆ.7: ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ಮಾಡುವ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುನ್ನು ವಿರೋಧಿಸಿ ನಾಳೆ(ಸೆ.9)ಕರೆ ನೀಡಿರುವ ರಾಜ್ಯ ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ.
ಇಂದಿನಿಂದಲೇ ನಗರದ ಮೈಸೂರು ಬ್ಯಾಂಕ್ ವೃತ್ತ, ಫ್ರೀಡಂ ಪಾರ್ಕ್, ಆನಂದರಾವ್ ವೃತ್ತ, ಪುರಭವನ ಸೇರಿದಂತೆ ನಾನಾ ಕಡೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಪ್ರತಿಭಟನೆಗಳು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ಆಯುಕ್ತ ಎನ್ಎಸ್ ಮೇಘರಿಕ್ ಹೇಳಿದರು.
ಬುಧವಾರ ನಗರದ ಪೊಲೀಸ್ ಆಯುಕ್ತರ ಪ್ರಧಾನ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಬಂದ್ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳುವ ಸಂಬಂಧ ಮಾತುಕತೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ತಮಿಳು ಭಾಷಿಕರು ಪ್ರಾಬಲ್ಯವಿರುವ ಪ್ರದೇಶಗಳು ಸೇರಿ ವಿವಿಧ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ರಜೆಗೆ ಸಲಹೆ: ಕಾವೇರಿ ವಿಚಾರಕ್ಕೆ ಸಂಬಂಧಿಸಿದಂತೆ 1991ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕ ಹಿಂಸಾಚಾರ ನಡೆದಿರುವುದನ್ನು ಮನಗಂಡು ಮುನ್ನೆಚ್ಚರಿಕೆ ಕ್ರಮವಾಗಿ ರಜೆ ನೀಡುವುದು ಸೂಕ್ತ ಎಂದು ಪೊಲೀಸರು ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಪ್ರಧಾನಿ ಮೋದಿಯನ್ನು ಭೇಟಿಯಾಗಲಿರುವ ದೇವೇಗೌಡ
ಬೆಂಗಳೂರು, ಸೆ.7: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ರಾಜ್ಯದಲ್ಲಿ ಉದ್ಭವಿಸಿರುವ ಸಮಸ್ಯೆ ಯನ್ನು ಬಗೆಹರಿಸುವಂತೆ ಪ್ರಧಾನಮಂತ್ರಿ ನರೇಂದ್ರಮೋದಿಗೆ ಮನವಿ ಮಾಡಲು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಿರ್ಧರಿಸಿದ್ದಾರೆ.
ಗುರುವಾರ ಬೆಳಗ್ಗೆ ಹೊಸದಿಲ್ಲಿಗೆ ತೆರಳಲಿರುವ ದೇವೇಗೌಡ, ಸುಪ್ರೀಂ ಕೋರ್ಟ್ನಲ್ಲಿ ರಾಜ್ಯದ ಪರವಾಗಿ ವಾದ ಮಾಡಿರುವ ಫಾಲಿ ಎಸ್.ನಾರಿಮನ್ ಸೇರಿದಂತೆ ವಕೀಲರ ತಂಡ ಹಾಗೂ ಕಾನೂನು ತಜ್ಞರ ಜೊತೆ ಕಾವೇರಿ ಸಮಸ್ಯೆ ಕುರಿತು ಚರ್ಚೆ ನಡೆಸಲಿದ್ದಾರೆ.
ಆನಂತರ, ಶುಕ್ರವಾರ ಸಂಜೆ 7 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಲಿರುವ ದೇವೇಗೌಡ, ಕಾವೇರಿ ಸಮಸ್ಯೆ ಬಗೆಹರಿಸಲು ಮಧ್ಯ ಪ್ರವೇಶಿಸುವಂತೆ ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.







