ಸೆ.22ಕ್ಕೆ ವಿಚಾರಣೆ ಮುಂದೂಡಿದ ಸ್ಪೀಕರ್
ರಾಜಸಭೆ ಚುನಾವಣೆಯಲ್ಲಿ ಅಡ್ಡ ಮತದಾನ

ಬೆಂಗಳೂರು, ಸೆ.7: ರಾಜ್ಯಸಭೆ ಹಾಗೂ ವಿಧಾನಪರಿಷತ್ತಿಗೆ ಇತ್ತೀಚೆಗೆ ನಡೆದಂತಹ ಚುನಾವಣೆಯಲ್ಲಿ ಅನ್ಯಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ ಎಂಟು ಮಂದಿ ಶಾಸಕರ ಸದಸ್ಯತ್ವ ಅನರ್ಹಗೊಳಿಸುವಂತೆ ಕೋರಿ ಜೆಡಿಎಸ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸ್ಪೀಕರ್ ಕೆ.ಬಿ.ಕೋಳಿವಾಡ ನೇತೃತ್ವದ ಅರೆನ್ಯಾಯಿಕ ಪ್ರಾಧಿಕಾರವು ಸೆ.22ಕ್ಕೆ ಮುಂದೂಡಿದೆ.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಗೆ ಮೂರು ಅಂಶಗಳ ಕುರಿತು ವಿವರಣೆ ನೀಡುವಂತೆ ಪತ್ರ ಬರೆಯುವುದರ ಜೊತೆಗೆ, ಎಂಟು ಮಂದಿ ಶಾಸಕರಿಗೂ ತಮ್ಮ ಪರವಾಗಿ ವಾದಿಸಲು ಒಂದು ವಾರದೊಳಗೆ ವಕೀಲರನ್ನು ನೇಮಿಸುವಂತೆ ಸೂಚಿಸಲಾಗಿದೆ.
ರಾಜ್ಯಸಭೆ ಹಾಗೂ ವಿಧಾನಪರಿಷತ್ತಿನ ಚುನಾವಣೆ ನಡೆದ ನಂತರ ಆರಂಭವಾದ ವಿಧಾನಸಭೆ ಕಲಾಪದ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದಂತಹ ತಮ್ಮ ಪಕ್ಷದ ಶಾಸಕರ ಹೆಸರು, ಅವರು ಪ್ರತಿನಿಧಿಸುವಂತಹ ಕ್ಷೇತ್ರ ಹಾಗೂ ಅವರ ಮನೆಯ ವಿಳಾಸಗಳ ಕುರಿತು ನಮಗೆ ಮಾಹಿತಿ ನೀಡಬೇಕಿತ್ತು ಎಂದು ಕೋಳಿವಾಡ ಹೇಳಿದರು.
ಘಟನೆ ನಡೆದ 15 ದಿನಗಳಲ್ಲಿ ಶಾಸಕರ ವಿರುದ್ಧ ಪಕ್ಷವು ವಿವರಣೆ ನೀಡಬೇಕಿತ್ತು. ಆದರೆ, ಈವರೆಗೆ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ತಮ್ಮ ಪಕ್ಷದ ಶಾಸಕರಾದ ಬಿ.ಬಿ.ನಿಂಗಯ್ಯ ಹಾಗೂ ಸಿ.ಎನ್.ಬಾಲಕೃಷ್ಣ ಎಂಟು ಮಂದಿ ಶಾಸಕರ ವಿರುದ್ಧ ನೀಡಿರುವ ದೂರಿನ ಬಗ್ಗೆ ತನ್ನ ಸಹಮತವಿದೆ ಎಂದಷ್ಟೇ ಹೇಳಿ ಕಳುಹಿಸಿದ್ದಾರೆ ಎಂದು ಕೋಳಿವಾಡ ತಿಳಿಸಿದರು.





