ಕಾಶ್ಮೀರ ಪಾಕ್‌ನ ಜೀವನಾಡಿ, ನಮ್ಮ ರಕ್ಷಣಾ ವ್ಯವಸ್ಥೆ ಅಭೇದ್ಯ: ಸೇನಾ ಮುಖ್ಯಸ್ಥ
ಇಸ್ಲಾಮಾಬಾದ್, ಸೆ. 7: ಕಾಶ್ಮೀರ ಪಾಕಿಸ್ತಾನದ ಜೀವನಾಡಿಯಾಗಿದೆ ಎಂದು ಹೇಳಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ರಹೀಲ್ ಶರೀಫ್, ರಾಜತಾಂತ್ರಿಕ ಮತ್ತು ನೈತಿಕ ನೆಲೆಗಳಲ್ಲಿ ಕಣಿವೆಯ ಜನರಿಗೆ ನೀಡುತ್ತಿರುವ ಬೆಂಬಲವನ್ನು ಇಸ್ಲಾಮಾಬಾದ್ ಮುಂದುವರಿಸುವುದು ಎಂದು ಹೇಳಿದ್ದಾರೆ.
‘‘ತಮ್ಮ ಸ್ವನಿರ್ಣಯದ ಹಕ್ಕಿಗಾಗಿ ಕಾಶ್ಮೀರದ ಜನತೆ ಮಾಡಿರುವ ಶ್ರೇಷ್ಠ ಬಲಿದಾನಗಳಿಗೆ ನಾವು ವಂದಿಸುತ್ತೇವೆ. ಈ ವಿಷಯದಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿರುವ ನಿರ್ಣಯಗಳನ್ನು ಜಾರಿಗೊಳಿಸುವುದರಲ್ಲಿ ಕಾಶ್ಮೀರ ವಿವಾದದ ಪರಿಹಾರವಿದೆ. ರಾಜತಾಂತ್ರಿಕ ಮತ್ತು ನೈತಿಕ ನೆಲೆಗಳಲ್ಲಿ ಕಾಶ್ಮೀರಕ್ಕೆ ಬೆಂಬಲ ನೀಡುವುದನ್ನು ಪಾಕಿಸ್ತಾನ ಮುಂದುವರಿಸುತ್ತದೆ’’ ಎಂದು ಸೇನಾ ಮುಖ್ಯಸ್ಥರು ಹೇಳಿದರು. ಪಾಕಿಸ್ತಾನ ರಕ್ಷಣಾ ದಿನದ ಸಂದರ್ಭದಲ್ಲಿ ರಾವಲ್ಪಿಂಡಿಯಲ್ಲಿರುವ ಸೇನೆಯ ಪ್ರಧಾನ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಪಾಕಿಸ್ತಾನದ ರಕ್ಷಣಾ ವ್ಯವಸ್ಥೆ ಅಭೇದ್ಯವಾಗಿದೆ ಎಂದು ಸೇನಾ ಮುಖ್ಯಸ್ಥರು ಹೇಳಿದರು. ‘‘ಪಾಕಿಸ್ತಾನದ ರಕ್ಷಣಾ ವ್ಯವಸ್ಥೆ ಮೊದಲೇ ಬಲಿಷ್ಠವಾಗಿತ್ತು ಹಾಗೂ ಈಗ ಅದು ಅಭೇದ್ಯವಾಗಿದೆ ಎಂಬುದನ್ನು ಎಲ್ಲ ಶತ್ರುಗಳಿಗೆ ನಾನು ಸಷ್ಟಪಡಿಸುತ್ತೇನೆ’’ ಎಂದು ಸೇನಾ ಮುಖ್ಯಸ್ಥರು ಹೇಳಿರುವುದಾಗಿ ‘ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.





