ಭಾರತಕ್ಕೆ ‘ಪ್ರಿಡೇಟರ್’ ಡ್ರೋನ್?
ವಾಶಿಂಗ್ಟನ್, ಸೆ. 7: ವಿಶೇಷವಾಗಿ ಹಿಂದೂ ಮಹಾ ಸಾಗರದಲ್ಲಿ ಕಣ್ಗಾವಲು ನಡೆಸುವುದಕ್ಕಾಗಿ ಅತ್ಯುನ್ನತ ತಂತ್ರಜ್ಞಾನ ಹೊಂದಿರುವ ಬಹೂಪಯೋಗಿ 22 ‘ಪ್ರಡೇಟರ್ ಗಾರ್ಡಿಯನ್’ ಡ್ರೋನ್‌ಗಳನ್ನು ಪೂರೈಸಬೇಕೆನ್ನುವ ಭಾರತದ ಬೇಡಿಕೆಗೆ ಅಮೆರಿಕ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಸೂಚನೆಗಳಿವೆ ಎಂದು ಮೂಲಗಳು ಹೇಳಿವೆ.
ಅಮೆರಿಕದ ‘ಮಹತ್ವದ ರಕ್ಷಣಾ ಭಾಗೀದಾರ’ನಾಗಿ ಭಾರತ ಜೂನ್‌ನಲ್ಲಿ ನಿಯೋಜನೆಗೊಂಡ ಬಳಿಕ ಈ ಬೆಳವಣಿಗೆ ನಡೆದಿದೆ. ಜೂನ್ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರನ್ನು ಶ್ವೇತಭವನದಲ್ಲಿ ಭೇಟಿಯಾದ ಬಳಿಕ ಭಾರತಕ್ಕೆ ಅಮೆರಿಕದ ‘ಮಹತ್ವದ ರಕ್ಷಣಾ ಭಾಗೀದಾರ’ ಸ್ಥಾನ ಲಭಿಸಿತ್ತು. ಅದಾದ ಕೆಲವೇ ವಾರಗಳಲ್ಲಿ, 22 ಪ್ರಡೇಟರ್ ಗಾರ್ಡಿಯನ್ ಡ್ರೋನ್‌ಗಳನ್ನು ಖರೀದಿಸುವ ಇಚ್ಛೆ ವ್ಯಕ್ತಪಡಿಸಿ ಭಾರತೀಯ ನೌಕಾಪಡೆಯು ಅಮೆರಿಕದ ರಕ್ಷಣಾ ಇಲಾಖೆಗೆ ಬೇಡಿಕೆ ಪತ್ರ ಸಲ್ಲಿಸಿತ್ತು. ಈ ಮನವಿಯ ಬಗ್ಗೆ ಅಮೆರಿಕ ಇನ್ನೂ ಯಾವುದೇ ಔಪಚಾರಿಕ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ ಈ ಬಗ್ಗೆ ಅಮೆರಿಕದ ಇಲಾಖೆಗಳ ನಡುವಿನ ಆಂತರಿಕ ಸಂವಹನ ಆರಂಭಗೊಂಡಿದೆ ಎಂದು ತಿಳಿದುಬಂದಿದೆ. ಇಂಥ ಒಂದು ಮಹತ್ವದ ಕರಾರು ಭಾರತ-ಅಮೆರಿಕ ರಕ್ಷಣಾ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ನೆರವು ನೀಡುತ್ತದೆ ಹಾಗೂ ಉಭಯ ದೇಶಗಳ ಸೇನೆಗಳ ನಡುವಿನ ಬಾಂಧವ್ಯವನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ ಹಾಗೂ ಭಾರತದ ಮೇಲೆ ಮಾತ್ರವಲ್ಲ, ಏಶ್ಯ-ಪೆಸಿಫಿಕ್ ವಲಯದ ಮೇಲಿನ ನಿರ್ಗಮನ ಅಧ್ಯಕ್ಷರ ಪ್ರಭಾವವನ್ನು ಶಾಶ್ವತಗೊಳಿಸುತ್ತದೆ ಎಂಬುದಾಗಿ ಅಮೆರಿಕದ ಆಡಳಿತ ಭಾವಿಸಿದೆ ಎಂದು ಮೂಲಗಳು ಹೇಳಿವೆ.





