ಕಾರವಾರ: ಸೌದಿಯಲ್ಲಿ ಶಿರವಾಡದ ಮಹಿಳೆಗೆ ಗೃಹ ಬಂಧನ

ಪೂರ್ಣಿಮಾ ಮತ್ತು ಮಕ್ಕಳು
- ಬ್ಯೂಟಿ ಪಾರ್ಲರ್ ಕೆಲಸಕ್ಕೆಂದು ಹೋದವಳಿಗೆ ಮೋಸ
- ಸ್ವದೇಶಕ್ಕೆ ಮರಳಲು ಡಿಸಿಗೆ ಮೊರೆ
ಕಾರವಾರ, ಸೆ.7: ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದ್ದ ಮಹಿಳೆಯೊಬ್ಬರು ಗೃಹ ಬಂಧನದಲ್ಲಿದ್ದು ಸ್ವದೇಶಕ್ಕೆ ಮರಳಲು ಹಾತೊರೆಯುತ್ತಿದ್ದಾರೆ. ಕಾರವಾರ ತಾಲೂಕಿನ ಶಿರವಾಡದ ಪೂರ್ಣಿಮಾ ಬಾಂದೇಕರ್ ಉದ್ಯೋಗದ ಆಸೆಗಾಗಿ ವಿದೇಶಕ್ಕೆ ತೆರಳಿ ಸ್ವದೇಶಕ್ಕೆ ಮರಳಲಾಗದ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ.
ಪೂರ್ಣಿಮಾ ಅವರು, ಮುಂಬಯಿ ಮೂಲದ ಸಮೀರ್ ಎನ್ನುವ ಏಜೆಂಟ್ ಮುಖಾಂತರ ದುಬೈನಲ್ಲಿ ಬ್ಯೂಟಿ ಪಾರ್ಲರ್ ಕೆಲಸ ಗಿಟ್ಟಿಸಿಕೊಂ ಡಿದ್ದರು. ಆದರೆ ಅವರಿಗೆೆ ಅಲ್ಲಿ ಮೋಸ ಆಗಿದೆ ಎಂದು ತಿಳಿದು ಬಂದಿದೆ. ಕಳೆದ ಮೇ 24ರಂದು ಏಜೆಂಟ್ ಸಮೀರ್ ಎಂಬ ವ್ಯಕ್ತಿ ಪೂರ್ಣಿಮಾ ಅವರಿಗೆ ಕರೆ ಮಾಡಿ ದಿಲ್ಲಿಗೆ ಬರಲು ಹೇಳಿದ್ದರು. ನೌಕರಿಯ ಆಸೆಗಾಗಿ ಪೂರ್ಣಿಮಾ ತನ್ನ ಪತಿ ರಾಜೇಂದ್ರ ಬಾಂದೇಕರ್ ಜೊತೆಗೆ ದಿಲ್ಲಿಗೆ ತೆರಳಿದ್ದರು. ನಿಮಗೆ ದುಬೈನ ಬ್ಯೂಟಿ ಪಾರ್ಲರ್ನಲ್ಲಿ 30 ರಿಂದ 40 ಸಾವಿರ ರೂ. ನೌಕರಿ ಕೊಡಿಸುವುದಾಗಿ ನಂಬಿಸಿ, ದುಬೈಗೆ ತೆರಳುವ ವೀಸಾವನ್ನು ಏಜೆಂಟ್ ಸಮೀರ್ ಪೂರ್ಣಿಮಾ ಕೈಗೆ ನೀಡಿದ್ದನು. ಬಳಿಕ ಪೂರ್ಣಿಮಾ ಏಜೆಂಟ್ ಮೂಲಕ ದುಬೈಗೆ ತಲುಪಿದ್ದಾರೆ. ದುಬೈಗೆ ತಲುಪುತ್ತಿದ್ದಂತೆ ಅಲ್ಲಿಂದ ಸೌದಿ ಅರೇಬಿಯಾಕ್ಕೆ ಕರೆದೋಯ್ಯ ಲಾಯಿತು. ಆದರೆ, ಸೌದಿಯಲ್ಲಿ ಅವರಿಗೆ ಬ್ಯೂಟಿ ಪಾರ್ಲರ್ ಕೆಲಸದ ಬದಲು ಮನೆ ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಹೇಳಿದ ಪ್ರಮಾಣದ ಸಂಬಳವು ನೀಡಿಲ್ಲ. ಅಲ್ಲಿನ ಮನೆಯಲ್ಲಿ ಮನೆಗೆಲಸದ ಜೊತೆಗೆ ಶೌಚಾಲಯ ಸ್ವಚ್ಛತೆ ಇನ್ನಿತರ ಕೆಲಸದ ಜೊತೆಗೆ ಮನೆ ಮಾಲಕರಿಂದ ಕಿರುಕುಳ ಅನುಭವಿಸಬೇಕಾಗುತ್ತಿದೆ ಎಂದು ಪೂರ್ಣಿಮಾ ಅವರು ತಿಳಿಸಿದ್ದಾರೆ.
ವಿದೇಶಕ್ಕೆ ತಲುಪಿದ ನಂತರ ಪೂರ್ಣಿಮಾ ತೀರಾ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಸೌದಿಯ ಮನೆ ಮಾಲಕರು ಯಾವುದಕ್ಕೂ ಸ್ವಾತಂತ್ರ್ಯ ನೀಡುತ್ತಿಲ್ಲ. ವಾಪಸ್ ಭಾರತಕ್ಕೆ ತಲುಪಿಸುವಂತೆ ಏಜೆಂಟ್ ಸಮೀರ್ಗೆ ಸಂಪರ್ಕಿಸಿದರೆ, ಅವರು ನನ್ನ ಕರೆಗೆ ಸ್ಪಂದಿಸುತ್ತಿಲ್ಲ. ಅಲ್ಲಿನ ಮಾಲಕರಿಗೆ ತನ್ನನ್ನು ಮನೆಗೆ ಕಳುಹಿಸುವಂತೆ ಅಂಗಲಾಚಿದರೂ ಯಾವುದೇ ಪ್ರಯೋಜನವಾಗಿಲ್ಲ. ವಾಪಸ್ ಭಾರತಕ್ಕೆ ತೆರಳಬೇಕು ಎಂದರೆ 2,70,000 ರೂ. ತುಂಬುವಂತೆ ಹೇಳಿ ತನಗೆ ದೌರ್ಜನ್ಯ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಸೌದಿಯಲ್ಲಿ ಮನೆಗೆಲಸಕ್ಕೆ 15 ಸಾವಿರ ವೇತನ ನೀಡಲಾಗುತ್ತಿದೆ. ತಮಗೆ ತನ್ನ ಪತಿ ಹಾಗೂ ತನ್ನಿಬ್ಬರು ಮಕ್ಕಳ ನೆನಪು ಕಾಡುತ್ತಿದೆ. ಸೌದಿಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ತನ್ನನ್ನು ಆದಷ್ಟು ಬೇಗ ಭಾರತಕ್ಕೆ ಕರೆಸಿಕೊಳ್ಳುವಂತೆ ಕೋರಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪೂರ್ಣೀಮಾ ಅವರು ಉತ್ತರ ಕನ್ನಡ ಜಿಲ್ಲಾಧಿಕಾರಿಯ ವಾಟ್ಸ್ ಆ್ಯಪ್ ಸಂಖ್ಯೆಗೆ ಸೌದಿಯಿಂದಲೇ ದೂರು ಸಲ್ಲಿಸಿದ್ದು ತಮ್ಮನ್ನು ರಕ್ಷಿಸುವಂತೆ ಅಂಗಲಾಚುತ್ತಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಜಿಲ್ಲಾಧಿಕಾರಿ
ಪೂರ್ಣಿಮಾ ಅವರು ಜಿಲ್ಲಾಧಿಕಾರಿ ವಾಟ್ಸ್ಆ್ಯಪ್ ಸಂಖ್ಯೆಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು, ತಕ್ಷಣ ಕಾರ್ಯ ಪ್ರವೃತ್ತರಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರು ವಿದೇಶಾಂಗ ಇಲಾಖೆಯ ದಿಲ್ಲಿ ಕಚೇರಿಯ ಸ್ಥಾನೀಕ ಉಪ ಆಯುಕ್ತರಿಗೆ ಮಾಹಿತಿ ನೀಡಿದ್ದು, ಉಪ ಆಯುಕ್ತರು ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ರವಾನಿಸಿದ್ದಾರೆ.







