ರೈತರ ಹಿತ ಕಾಪಾಡಲು ಸರಕಾರ ಬದ್ಧ: ಡಿಕೆಶಿ
ಕಾವೇರಿ ನದಿ ನೀರು ವಿವಾದ

ಬೆಂಗಳೂರು, ಸೆ.8: ಕಾವೇರಿ ನದಿ ನೀರಿನ ವಿಚಾರವಾಗಿ ರಾಜ್ಯದ ಹಿತ ಕಾಪಾಡಲು ಎಲ್ಲ ಪ್ರಯತ್ನವನ್ನು ಸರಕಾರ ಮಾಡುತ್ತಿದ್ದೆ. ರೈತರು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಯತ್ನದಂತಹ ಅನಾಹುತ ಕೃತ್ಯಗಳಿಗೆ ಮುಂದಾಗಬಾರದು. ನಮ್ಮ ರೈತರ ಬೆಳೆ ಉಳಿಸಿಕೊಳ್ಳಲು ಸರಕಾರ ಬದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹತ್ತು ಗಂಟೆಯಿಂದ ರಾಜ್ಯದ ಕಾಲುವೆಗಳಲ್ಲಿ ನೀರು ಬಿಡುಗಡೆಗೆ ಸರ್ಕಾರ ತೀರ್ಮಾನಿಸಿದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವ ನಗರದಲ್ಲಿರುವ ತನ್ನ ನಿವಾಸದಲ್ಲಿಂದು ಬೆಳಗ್ಗೆ ಕರೆದ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಶಾಂತ ರೀತಿಯಿಂದ ಹೋರಾಟ ಮಾಡಬೇಕು. ಉಗ್ರ ಪ್ರತಿಭಟನೆ ಹಿಂಪಡೆಯಬೇಕುಶಾಲಾ ಕಾಲೇಜುಗಳಿಗೆ, ಆಸ್ಪತ್ರೆಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ವಿಚಾರದಲ್ಲಿ ಯಾವುದೇ ಪಕ್ಷ ರಾಜಕಾರಣ ಮಾಡದಂತೆ ಅವರು ಮನವಿ ಮಾಡಿದರು.
ಸೆ.10ರೊಳಗಾಗಿ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲು ಉದ್ದೇಶಿಸಲಾಗಿದೆ. ನಮ್ಮ ರೈತರನ್ನು ಉಳಿಸಿಕೊಳ್ಳುವ ಸಲುವಾಗಿ ಶಾಸಕರು, ಸಂಸದರು, ರೈತ ಮುಖಂಡರನ್ನು ಸಂಪರ್ಕಿಸಿದ್ದೇನೆ ಎಂದರು.
ಮಂಡ್ಯದಲ್ಲಿ ಎರಡು ದಿನ ರಜೆ ಘೋಷಿಸಲಾಗಿತ್ತು. ಆದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಶಾಲಾ-ಕಾಲೇಜುಗಳನ್ನು ಇವತ್ತಿನಿಂದ ಪುನಾರಂಭ ಮಾಡಲಾಗಿದೆ ಎಂದವರು ಹೇಳಿದರು.
ಪುಟ್ಟಣ್ಣಯ್ಯ ನೇತೃತ್ವದ ರೈತ ಸಂಘಟನೆ ಪ್ರತಿಭಟನೆ ಹಿಂಪಡೆಯಲು ಒಪ್ಪಿದೆ. ಅದೇ ರೀತಿ ಕರ್ನಾಟಕ ಬಂದ್ ಕರೆಯನ್ನೂ ಹಿಂಪಡೆಯಲೂ ಸರಕಾರಕ್ಕೆ ಮನವಿ ಮಾಡಲಾಗಿದೆ. ಬಂದ್‌ನಿಂದ ಜನಜೀವನ ಅಸ್ತವ್ಯಸ್ತಗೊಳ್ಳಲಿದ್ದು, ಅವರು ಸಮಸ್ಯೆಗೆ ಸಿಲುಕುವರು ಎಂಬುದನ್ನು ಮನಗಾಣಬೇಕು ಎಂದವರು ನುಡಿದರು.
ಮಳೆಯಾಗುವ ಕುರಿತಂತೆ ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ವಿಫಲವಾಗಿದೆ. ಮಳೆಯ ಕೊರತೆ ಕಾರಣ ರೈತರ ಬೆಳೆಗಳಿಗೆ ನೀರು ಬಿಡುವುದರಿಂದ ಡೆಡ್ ಸ್ಟೋರೇಜ್ ಕೂಡ ಖಾಲಿಯಾಗುವ ಸಾಧ್ಯತೆ ನಿಜ. ಆದರೆ ಕುಡಿಯುವ ನೀರು ಸರಬರಾಜು ನಿಲ್ಲಿಸಲು ಸಾಧ್ಯವಿಲ್ಲ. ಪರಿಸ್ಥಿತಿ ಹೇಗೆ ಬರುತ್ತದೋ ಗಮನಿಸಿ ಅದಕ್ಕೆ ತಕ್ಕಂತೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.





