ಪತ್ನಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಪತಿರಾಯ

ಕಾಸರಗೋಡು, ಸೆ.8: ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈಯಲೆತ್ನಿಸಿದ ಅಮಾನುಷ ಘಟನೆ ವಿದ್ಯಾನಗರ ಚಾಲದ ವಸತಿಗೃಹವೊಂದರಲ್ಲಿ ಬುಧವಾರ ರಾತ್ರಿ ನಡೆದಿದೆ.
ಆಸಿರಾ(22) ಬೆಂಕಿಯಿಂದ ಗಾಯಗೊಂಡವರು. ಇವರ ಪತಿ ನಫೀಸ್ ಕೊಲೆ ಯತ್ನ ಆರೋಪಿ. ಬೆಂಕಿಯಿಂದ ಗಂಭೀರ ಗಾಯಗೊಂಡಿರುವ ಆಸಿರಾರನ್ನ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರಿಬ್ಬರು ಉತ್ತರಪ್ರದೇಶದ ನಿವಾಸಿಗಳಾಗಿದ್ದಾರೆ. ವಿದ್ಯಾನಗರ ಚಾಲದ ವಸತಿ ಗೃಹದಲ್ಲಿ ವಾಸವಾಗಿದ್ದರು. ಇವರ ವಿವಾಹ ಆರು ತಿಂಗಳ ಹಿಂದೆ ನಡೆದಿತ್ತು. ಒಂದು ತಿಂಗಳ ಹಿಂದೆಯಷ್ಟೇ ಚಾಲಕ್ಕೆ ತಲುಪಿದ್ದರು. ನಫೀಸ್ ಹೊಲಿಗೆ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಗಮನಿಸಿದಾಗ ಆಸಿರಾಳ ಮೈಮೇಲೆ ಬೆಂಕಿ ಉರಿಯುತ್ತಿತ್ತು.
ಬೆಂಕಿ ನಂದಿಸಿದ ಸ್ಥಳೀಯರು ಕೂಡಲೇ ಆಕೆಯನ್ನು ಕಾಸರಗೋಡು ಆಸ್ಪತ್ರೆಗೆ ತಲುಪಿಸಿದರು. ಸ್ಥಿತಿ ಗಂಭೀರ ಇದ್ದುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಆಸಿರಾರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತು.
ಪತಿ ನಫೀಸ್ ಬೆಂಕಿ ಹಚ್ಚಿರುವುದಾಗಿ ಆಸಿರಾ ವೈದ್ಯರಲ್ಲಿ ತಿಳಿಸಿದ್ದಾಳೆನ್ನಲಾಗಿದೆ. ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ದೂರಲಾಗಿದೆ. ಈ ಬಗ್ಗೆ ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.





