ಕೇರಳ: ದೇವಸ್ವಂ ದೇವಳಗಳಲ್ಲಿ ಆಯುಧ ತರಬೇತಿ ನಿಷೇಧ

ತಿರುವನಂತಪುರಂ,ಸೆಪ್ಟಂಬರ್ 8: ಇನ್ನುಮುಂದೆ ಕೇರಳದ ದೇವಸ್ವಂ ಬೋರ್ಡ್(ಮುಜರಾಯಿ ಅಧೀನವಿರುವ) ದೇವಳಗಳಲ್ಲಿ ಆಯುಧ, ದೈಹಿಕ ತರಬೇತಿಯನ್ನು ನಿಷೇಧಿಸಲಾಗುವುದು. ಇದಕ್ಕೆ ಸಂಬಂಧಿಸಿದ ಕೇರಳ ಪೊಲೀಸ್ ಕಾನೂನು ಪ್ರಕಾರ ದೇವಸ್ವಂ ಖಾತೆ ತಯಾರಿಸಿದ ಆದೇಶಕ್ಕೆ ಕಾನೂನು ಖಾತೆ ಅಂಗೀಕಾರ ನೀಡಿದೆ. ದೇವಸ್ವಂ ಕಾರ್ಯದರ್ಶಿ ಆದೇಶವನ್ನು ಕಾನೂನು ಕಾರ್ಯದರ್ಶಿಯ ಸಲಹೆಗೊಪ್ಪಿಸಲಾಗಿತ್ತು. 1988 ಧಾರ್ಮಿಕ ಕಾನೂನಿನ್ವಯ ರಾಜಕೀಯ ಆವಶ್ಯಕತೆಗೆ ಆರಾಧನಾಲಯಗಳನ್ನು ಬಳಸುವಂತಿಲ್ಲ ಎಂದು ವರದಿಯಾಗಿದೆ. ಈ ಕಾನೂನು ಪ್ರಕಾರ ದೇವಸ್ಥಾನದ ಆವರಣದೊಳಗೆ ಆಯುಧ ತರಬೇತಿ, ದೈಹಿಕ ಕಸರತ್ತು ತರಬೇತಿ ನಡೆಸುವುದನ್ನು ತಡೆಯಬಹುದಾಗಿದೆ ಎಂದು ಕಾನೂನು ಖಾತೆಯ ಕಾರ್ಯದರ್ಶಿ ದೇವಸ್ವಂ ಖಾತೆಗೆ ಸಲಹೆ ನೀಡಿದ್ದಾರೆ.
ಈ ನಡುವೆ , ದೇವಸ್ವಂ ಬೋರ್ಡ್‌ನ ದೇವಳಗಳಲ್ಲಿ ಆಯುಧ ತರಬೇತಿ ಅನುಮತಿಸಲು ಸಾಧ್ಯವಿಲ್ಲ ಎಂದು ತಿರುವಾಂಕೂರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಪ್ರಯಾರ್ ಗೋಪಾಲಕೃಷ್ಣನ್ ಹೇಳಿದ್ದಾರೆ. ಆದರೆ ಆಯುಧ ತರಬೇತಿ ನಡೆಯುತ್ತಿದೆ ಎಂದು ತನಗೆ ದೂರು ಸಿಕ್ಕಿಲ್ಲ. ಸಿಕ್ಕಿದರೆ ಸಂಬಂಧಿಸಿದವರೊಂದಿಗೆ ಮಾತಾಡಿ ಅದನ್ನು ಕೊನೆಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. ಅದಕ್ಕೆ ಅವರು ಸಿದ್ಧರಿಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮಗಳನ್ನು ಜರಗಿಸಲಾಗುವುದು ಎಂದಿದ್ದಾರೆ.
ಆರೆಸ್ಸೆಸ್‌ನ್ನು ಗುರಿಯಾಗಿಟ್ಟು ಸರಕಾರ ಹೊಸ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಎ ದೇವಸ್ವಂ ಬೋರ್ಡ್ ದೇವಳಗಳಲ್ಲಿ ಆರೆಸ್ಸೆಸ್ ಶಾಖಾ ಇರುವುದರ ವಿರುದ್ಧ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಕೆಲವು ದಿವಸದ ಹಿಂದೆ ಹೇಳಿಕೆ ನೀಡಿದ್ದರು. ದೇವಳಗಳಲ್ಲಿ ಆರೆಸ್ಸೆಸ್ ಶಾಖೆ ಇರುವುದರ ವಿರುದ್ಧ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಕೆಲವು ದಿವಸಗಳಿಂದ ವಿರೋಧ ವ್ಯಕ್ತಪಡಿಸುತ್ತಾಬಂದಿದ್ದಾರೆ. ಕೇರಳದಲ್ಲಿ ಆರೆಸ್ಸೆಸ್‌ಗೆ ಐದು ಸಾವಿರಕ್ಕೂ ಅಧಿಕ ಶಾಖೆಗಳಿವೆ. ದೇವಸ್ವಂ ಬೋರ್ಡ್ ಅಧೀನದ ದೇವಳಗಳಲ್ಲಿ ಶಾಖೆಗಳಿಲ್ಲ ಎಂದು ಸಂಘಪರಿವಾರ ಹೇಳುತ್ತಿದೆ.
ಆರೆಸ್ಸೆಸ್‌ನ್ನು ನಿಯಂತ್ರಿಸುವ ಶ್ರಮ ಯಶಸ್ವಿಯಾಗಲಿಕ್ಕಿಲ್ಲ. ಇಂದಿರಾಗಾಂಧಿ ಯತ್ನಿಸಿಯೂ ಅದು ಸಾಧ್ಯವಾಗಿಲ್ಲ. ಅದನ್ನು ಮುಖ್ಯಮಂತ್ರಿ ಪಿಣರಾಯಿವಿಜಯನ್ ಮಾಡಲು ಹೊರಟಿದ್ದಾರೆ. ಆರೆಸ್ಸೆಸ್ ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕುಮ್ಮನಂ ರಾಜಶೇಖರನ್ ಹೇಳಿದ್ದಾರೆ. ಶಾಖಾ ಚಟುವಟಿಕೆಗಳ ಮೂಲಕ ದೇವಳಗಳನ್ನು ಆಯುಧ ಸಂಗ್ರಹಾಲಯಗಳಾಗಿ ಆರೆಸ್ಸೆಸ್ ಪರಿವರ್ತಿಸುತ್ತಿದೆ ಎಂದು ಸಚಿವ ಕಡಕಂಪಳ್ಳಿ ಸುರೇಂದ್ರನ್ ಫೇಸ್‌ಬುಕ್ ಮೂಲಕ ಆರೋಪಿಸಿದ್ದಾರೆ ಎಂದು ವರದಿ ತಿಳಿಸಿದೆ.







