ಆಕ್ಟಿವಾಗೆ ಹಿಂದಿನಿಂದ ಢಿಕ್ಕಿ ಹೊಡೆದ ಕೆಎಸ್ಸಾರ್ಟಿಸಿ ಬಸ್: ಗರ್ಭಿಣಿ ಸ್ಥಳದಲ್ಲೇ ಮೃತ್ಯು
ಪತಿ, ಮಗು ಅಪಾಯದಿಂದ ಪಾರು

ಪುತ್ತೂರು, ಸೆ.8: ಮುಂದಿನಿಂದ ತೆರಳುತ್ತಿದ್ದ ಆಕ್ಟಿವಾಕ್ಕೆ ಕೆಎಸ್ಸಾರ್ಟಿಸಿ ಬಸ್ಸೊಂದು ಢಿಕ್ಕಿ ಹೊಡೆದು ಆಕ್ಟಿವಾದಲ್ಲಿ ಪ್ರಯಾಣಿಸುತ್ತಿದ್ದ ಸಹಸವಾರೆ ಗರ್ಭಿಣಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಹಾಗೂ ಆಕೆಯ ಪತಿ ಮತ್ತು ಮೂರು ವರ್ಷದ ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾದ ಘಟನೆ ಗುರುವಾರ ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಎಂಬಲ್ಲಿ ಸಂಭವಿಸಿದೆ.
ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪಂಜಿಕಾರ್ ನಿವಾಸಿ ಮೊಯ್ದೀನ್‌ಕುಂಞಿ ಅವರ ಪತ್ನಿ ಅಮೀನ (30) ಮೃತಪಟ್ಟ ಮಹಿಳೆ. ಈಕೆ ಪುತ್ತೂರು ತಾಲೂಕಿನ ಬೆಳಂದೂರು ಗ್ರಾಮದ ದೇವಸ್ಯ ನಿವಾಸಿಯಾದ ಬೆಳಂದೂರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ನಝೀರ್ ದೇವಸ್ಯ ಅವರ ಸಹೋದರಿ. ಈ ಘಟನೆಯಲ್ಲಿ ಮೊಯ್ದೀನ್‌ಕುಂಞಿ ಮತ್ತು ಅವರ ಮೂರು ವರ್ಷ ಪ್ರಾಯದ ಪುತ್ರ ಮುಹಮ್ಮದ್ ಮಾರೂಫ್ ಸಣ್ಣಪುಟ್ಟ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೊಯ್ದೀನ್‌ಕುಂಞಿ ಅವರು ಏಳು ತಿಂಗಳ ಗರ್ಭಿಣಿಯಾಗಿರುವ ತನ್ನ ಪತ್ನಿ ಅಮೀನ ಅವರನ್ನು ಪುತ್ತೂರಿನ ಧನ್ವಂತರಿ ಆಸ್ಪತ್ರೆಯಲ್ಲಿ ತಪಾಸಣೆಗೊಳಪಡಿಸಿ ಮರಳಿ ತನ್ನ ಆಕ್ಟಿವಾದಲ್ಲಿ ಮನೆಗೆ ಕರೆದೊಯ್ಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೊಯ್ದೀನ್‌ಕುಂಞಿ ಅವರು ಪುತ್ತೂರಿನಿಂದ ಕುಂಬ್ರ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಆಕ್ಟಿವಾಗೆ ಪುತ್ತೂರಿನಿಂದ ಸುಳ್ಯ ಮಡಿಕೇರಿ ಮೂಲಕವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮುಕ್ರಂಪಾಡಿ ಬಳಿ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಢಿಕ್ಕಿಯಾದ ವೇಳೆ ಆಕ್ಟಿವಾದಿಂದ ರಸ್ತೆಗೆ ಎಸೆಯಲ್ಪಟ್ಟ ಅಮೀನಾ ಅವರ ಮೇಲೆಯೇ ಬಸ್ ಚಲಿಸಿದ ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಕ್ಟಿವಾದಲ್ಲಿದ್ದ ಮಗು ಮುಹಮ್ಮದ್ ಮಾರೂಫ್ ರಸ್ತೆಗೆ ಎಸೆಯಲ್ಪಟ್ಟಿದ್ದರೂ ಪರಚಿದ ಗಾಯಗಳೊಂದಿಗೆ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸವಾರ ಮೊಯ್ದೀನ್‌ಕುಂಞಿ ಅವರ ಕೈ ಮತ್ತು ಕಾಲಿನ ಭಾಗಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ.
ಬೆಳಂದೂರು ಗ್ರಾಮದ ದೇವಸ್ಯ ನಿವಾಸಿ ಮುಹಮ್ಮದ್ ಯಾನೆ ಅಬ್ಬು ಅವರ ಪುತ್ರಿಯಾದ ಅಮೀನಾರನ್ನು 12 ವರ್ಷಗಳ ಹಿಂದೆ ಪಂಜಿಕಾರಿನ ಮೊಯ್ದೀನ್‌ಕುಂಞಿ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಇದೀಗ ಅಮೀನ ಎರಡನೆ ಬಾರಿ ಗರ್ಭಿಣಿಯಾಗಿದ್ದು, ಆಕೆ ಏಳು ತಿಂಗಳ ಗರ್ಭಿಣಿಯಾಗಿದ್ದ ಕಾರಣ ಈ ದುರಂತದಿಂದಾಗಿ ತಾಯಿಯ ಜೊತೆಗೆ ಹೊಟ್ಟೆಯೊಳಗಿದ್ದ ಶಿಶುವಿನ ಮರಣವೂ ಸಂಭವಿಸಿದೆ. ಕೂಲಿ ಕಾರ್ಮಿಕರಾದ ಮೊಯ್ದೀನ್‌ಕುಂಞಿ ಅವರ ಕುಟುಂಬಕ್ಕೆ ಈ ದುರಂತ ದೊಡ್ಡ ಆಘಾತ ನೀಡಿದೆ.
ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಚಾಲಕನ ವಿರುದ್ದ ಕೇಸು ದಾಖಲಾಗಿದ್ದು, ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







