ಮುಸ್ತಫಾರ ಪಶುಪ್ರೇಮ
ಬಾಲಕನಾಗಿದ್ದಾಗಲೇ ಗೋಪಾಲಕ; ಇಂದು ಹೈನುಕೃಷಿಕ

ಗೋವಿನ ವಿಚಾರದಲ್ಲಿ ಕರಾವಳಿಯಲ್ಲಿ ಬಡಿದಾಟವೇ ಜಾಸ್ತಿ. ಅದರಿಂದಾಗಿಯೇ ಕೋಮು ವೈಷಮ್ಯ ಮಿತಿಮೀರಿದೆ. ಸಾವುನೋವುಗಳು ನಿರಂತರವಾಗಿವೆ. ಗೋವು ಇಂದು ರಾಷ್ಟ್ರಮಟ್ಟದ ವಿವಾದಾತ್ಮಕ ಸುದ್ದಿಯೂ ಆಗಿದೆ. ಆದರೆ ಇದಕ್ಕೆ ವ್ಯತಿರಿಕ್ತವೆಂಬಂತೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಗೋಳ್ತಮಜಲು ನಿವಾಸಿ ಅಹ್ಮದ್ ಮುಸ್ತಫಾ ಹಜಾಜ್ ದನಗಳೊಂದಿಗೆ ಪ್ರೀತಿಯಿಂದ ಕಾಲ ಕಳೆಯುತ್ತಿದ್ದಾರೆ. ಗೋವಿನ ಮೇಲಿರುವ ಅತಿರೇಕದ ಪ್ರೇಮವಾತ್ಸಲ್ಯಕ್ಕೆ ಸಾಕ್ಷಿಯಾಗಿ ಗೋಳ್ತಮಜಲಿನ ‘ಹಜಾಜ್ ಫಾರ್ಮ್‘ ಸಮೃದ್ಧವಾಗಿ ನೆಲೆ ನಿಂತಿದೆ. ಇಲ್ಲಿ ವೈಷಮ್ಯವಿಲ್ಲ. ಏನಿದ್ದರೂ ಮುಸ್ತಫಾ ಮತ್ತು ಪಶುಗಳ ಮಧ್ಯೆ ಮಧುರವಾದ ಬಾಂಧವ್ಯವಷ್ಟೆ.
ಅಹ್ಮದ್ ಮುಸ್ತಫಾ ಅವರು ಗೋಳ್ತಮಜಲು ಹಜಾಜ್ ಇಂಡಸ್ಟ್ರೀಸ್‌ನ ಸ್ಥಾಪಕ ಹಾಗೂ ಸಾಹಿತಿ ಅಬ್ದುಲ್ ಖಾದರ್ ಹಾಜಿ ಅವರ ಪುತ್ರ. ಸಣ್ಣದರಲ್ಲೇ ಮೂಲಮನೆಯಲ್ಲಿ ತಂದೆಯವರು ಸಾಕುತ್ತಿದ್ದ ಎರಡ್ಮೂರು ದನಗಳನ್ನು ಮೇಯಿಸುವುದು, ಹಾಲು ಕರೆಯುವಾಗ ನೋಡುವುದು, ಕರು ಹಾಕುವಾಗ ಕುತೂಹಲದಿಂದ ವೀಕ್ಷಿಸುವುದು, ಹುಲ್ಲು ಹಾಕುವುದು ಮುಸ್ತಫಾ ಅವರ ಹವ್ಯಾಸವಾಗಿತ್ತು. ಆ ಹವ್ಯಾಸ ಇಂದಿಗೂ ಮುಂದುವರಿದು ಹೈನು ಕೃಷಿಕರಾಗುವ ಮಟ್ಟಕ್ಕೆ ಬೆಳೆದಿದ್ದಾರೆ.
ಕಳೆದ 12 ವರ್ಷಗಳ ತರುವಾಯ ಮನೆಯ ಪಕ್ಕದಲ್ಲೇ ದನದ ಹಟ್ಟಿ ಮಾಡಿ ಸ್ವಂತದ್ದಾಗಿ ಒಂದು ಜೆರ್ಸಿ ದನ ಖರೀದಿಸಿ ಪ್ರಾರಂಭಿಸಿದ ಹೈನು ಕೃಷಿ ಇಂದು 33 ವಿವಿಧ ತಳಿಗಳ ದನಗಳೊಂದಿಗೆ ನಳನಳಿಸುತ್ತಿದೆ. ಮುಸ್ತಫಾರ ಜಮೀನು ತುಂಬಾ ಕೇಳುವ ‘ಅಂಬಾ’ ಕಲರವ, ಸೆಗಣಿಮೂತ್ರದ ಘಮಲು ನಮ್ಮನ್ನು 25 ವರ್ಷಗಳ ಹಿಂದಿನ ಹಳ್ಳಿ ಜೀವನದತ್ತ ಕೊಂಡೊಯ್ಯುತ್ತದೆ.
ಹಿಂದಿನ ಕಾಲದಲ್ಲಿ ಪ್ರತಿ ಮನೆ ಮನೆಗಳಲ್ಲಿ ಹಾಲು ಮತ್ತು ಗೊಬ್ಬರಕ್ಕಾಗಿ ಹಸುಗಳನ್ನು ಸಾಕುತ್ತಿದ್ದರು. ಮನೆಯ ಪಕ್ಕವೇ ಹಟ್ಟಿ ಇರುತ್ತಿತ್ತು. ಇಂದು ಅಂತಹವುಗಳನ್ನು ಕಾಣಬೇಕಾದರೆ ಹಳ್ಳಿಗಾಡಿಗೆ ಹೋಗಬೇಕು. ಅದು ಕೂಡಾ ಅಪರೂಪ. ಆದರೆ ಪೇಟೆ ಮತ್ತು ಮುಖ್ಯ ರಸ್ತೆಯ ಅಂಚಿನಲ್ಲೇ ಇರುವ ಮುಸ್ತಫಾರ ಮನೆ ಸಮೀಪದ ದನದ ಹಟ್ಟಿ ಹೈನುಗಾರಿಕೆ ಮಾಡಿ ಕೈಸುಟ್ಟವರಿಗೆ ಮತ್ತು ಮಾಡುತ್ತಿರುವವರಿಗೆ ಮಾದರಿಯಾಗಿದೆ. ಇವರ ಹಟ್ಟಿಯಲ್ಲಿ 27 ದನಗಳು ಮತ್ತು 6 ಕರುಗಳಿವೆ. ನೋಡಲು ಒಂದಕ್ಕಿಂತ ಒಂದು ಚೆಂದ. ಮುಸ್ತಫಾ ಅವುಗಳನ್ನೆಲ್ಲಾ ಮಗುವಿನಂತೆ ಜೋಪಾನವಾಗಿ ಸಲಹುತ್ತಿದ್ದಾರೆ. ಉದ್ಯಮದ ಬಿಝಿಯ ನಡುವೆಯೂ ದಿನನಿತ್ಯ ಕೆಲವೊಂದು ತಾಸುಗಳನ್ನು ದನಗಳಿಗಾಗಿ ಮುಡಿಪಾಗಿಟ್ಟಿದ್ದಾರೆ.
"ಇದು ಲಾಭದಾಯಕವಲ್ಲ. ಕಳೆದ 12 ವರ್ಷದಿಂದ ಹೈನುಕೃಷಿಗೆ ಹಣ ಹಾಕಿದ್ದೇನೆ. ನಷ್ಟ ಅನುಭವಿಸಿದ್ದೇನೆ. ಇತ್ತೀಚಿನ ದಿನಗಳಿಂದ ಅಸಲು ಆಗುತ್ತಿದೆ. ಕೆಎಂಎಫ್ ಡೈರಿಗೆ ನೀಡುವ ಹಾಲು ಮಾರಾಟದಲ್ಲಿ ಸಿಗುವ ಸಬ್ಸಿಡಿಯಿಂದಾಗಿ ಚಿಲ್ಲರೆ ಹಣ ಉಳಿಯುತ್ತಿದೆ. ಇದೊಂದು ಹವ್ಯಾಸ ಮತ್ತು ಗೋವಿನ ಮೇಲಿರುವ ಪ್ರೇಮವಷ್ಟೆ. ಇದರ ಮೂಲಕ ಲಾಭ ನನ್ನ ಉದ್ದೇಶವಲ್ಲ" ಎನ್ನುತ್ತಾರೆ ಮುಸ್ತಫಾ.
ಮುಸ್ತಫಾ ದಿನನಿತ್ಯ ಒಟ್ಟು 240 ಲೀಟರ್ ಹಾಲನ್ನು ಮಾರುತ್ತಾರೆ. ಅವರ ಬಳಿ ಇರುವ ಆಸ್ಟ್ರೇಲಿಯನ್ ತಳಿಯ ಎಚ್ಎಫ್ (ಹೋಲ್ ಸ್ಟೈನ್) ಹಸುಗಳು ಸುಮಾರು 15 ರಿಂದ 25 ಲೀಟರ್ ಹಾಲು ಕೊಡುತ್ತದೆ. ಗುಜರಾತಿನ ಗಿರ್ ತಳಿ 10 ರಿಂದ 23 ಲೀಟರ್, ಜೆರ್ಸಿ 8 ರಿಂದ 15 ಲೀಟರ್ ಹಾಲು ಉತ್ಪಾದಿಸುತ್ತದೆ. ಆಸ್ಟ್ರೇಲಿಯನ್ ಎಚ್ಎಫ್ ಹೆಚ್ಚು ಹಾಲು ನೀಡಿದರೂ ಅದಕ್ಕೆ ಬಹಳ ಬೇಗ ರೋಗ ಬಾಧಿಸುತ್ತದೆ. ಆದ್ದರಿಂದ ಅದನ್ನು ಸದಾ ಜಾಗರೂಕತೆಯಲ್ಲಿ ಸಾಕಬೇಕಾಗುತ್ತದೆ. ಸ್ವದೇಶಿ ಹಾಗೂ ಜೆರ್ಸಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಸಮಸ್ಯೆ ಇಲ್ಲವೆನ್ನುತ್ತಾರೆ ಮುಸ್ತಫಾ. ಇವಲ್ಲದೆ ಸಾಯಿವಾಲ್ ಹಾಗೂ ಥಾರ್ ಪಾರ್ಕರ್ ತಳಿಗಳು ಕೂಡಾ ಹಟ್ಟಿಯಲ್ಲಿವೆ. ಮೂತ್ರದಲ್ಲಿ ಚಿನ್ನ ನೀಡುವ ತಳಿ ಎಂದು ಇತ್ತೀಚೆಗೆ ಪ್ರಸಿದ್ಧಿ ಪಡೆದು ಸಂಶೋಧನೆಯ ಪ್ರಗತಿಯಲ್ಲಿರುವ ಗುಜರಾತಿನ ಗಿರ್ ತಳಿ ಕೂಡಾ ಮುಸ್ತಫಾರ ಹಟ್ಟಿಯನ್ನು ಅಲಂಕರಿಸಿವೆ. ಇವನ್ನೆಲ್ಲಾ ಸಾಕಿ ಸಲಹುವುದೆಂದರೆ ಸಾಹಸದ ಕೆಲಸ. ಸಮಯಕ್ಕನುಸಾರ ಹುಲ್ಲು, ಹಿಂಡಿ ನೀಡುವುದು, ಅದರ ಸೆಗಣಿ, ಮೂತ್ರವನ್ನು ಶುಚಿಗೊಳಿಸುವುದು, ದನಗಳ ಸ್ನಾನ, ಹಟ್ಟಿ ಶುದ್ಧೀಕರಣ, ಹುಲ್ಲು ಸಂಗ್ರಹ, ಗರ್ಭಿಣಿ ಹಸುಗಳ ಆರೈಕೆ, ರೋಗ ಬಾರದಂತೆ ಮದ್ದು, ಕರುಗಳ ರಕ್ಷಣೆ ಇವೆಲ್ಲಾ ಸುಲಭದ ಕೆಲಸವಲ್ಲ. ಮನೆಯಲ್ಲಿ ಒಂದು ದನ ಇದ್ದರೇನೇ ಮೈಂಟೇನ್ ಮಾಡಲಾಗದ ಇಂದಿನ ಜನರೇಶನ್ ಗೆ ಅಹ್ಮದ್ ಮುಸ್ತಫಾ ಸವಾಲಾಗಿದ್ದಾರೆ.
ಮುಸ್ತಫಾರ ಹಸುವಿನ ಫಿದಾಕ್ಕೆ ಸಹಕಾರ ನೀಡಲು ಮೂವರು ಕೆಲಸಗಾರರಿದ್ದಾರೆ. ಹಾಲು ಕರೆಯುವ ಯಂತ್ರ ಇದೆ. ನೀವ್ಯಾವಾಗ ಬೇಕಾದರೂ ಸಂದರ್ಶಿಸಿ ಹಟ್ಟಿ ಮತ್ತು ದನಗಳು ಸದಾ ಶುಚಿತ್ವದಿಂದ ಕಂಗೊಳಿಸುವುದು ಮುಸ್ತಫಾರ ಹೈನು ಫಾರ್ಮ್ ನ ವಿಶೇಷತೆ. ದನಗಳಿಗೆ ಆಹಾರವಾಗಿ ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ಹೈಬ್ರಿಡ್ ಹುಲ್ಲು ಬೆಳೆಸುತ್ತಿದ್ದಾರೆ. ಕೆಲಸ ಮಾಡುವ ಎರಡು ಕುಟುಂಬಕ್ಕೆ ತನ್ನದೇ ಜಾಗದಲ್ಲಿ ಮನೆ ನಿರ್ಮಿಸಿ ಉಚಿತವಾಗಿ ನೀಡಿದ್ದಾರೆ. ದನದ ಸೆಗಣಿಯಲ್ಲಿ ಗೋಬರ್ ಗ್ಯಾಸ್ ಉತ್ಪಾದಿಸಿ ಕೆಲಸಗಾರರ ಮನೆಯ ಅಗತ್ಯಕ್ಕೆ ನೀಡುತ್ತಿದ್ದಾರೆ. ಗೊಬ್ಬರದ ನೀರಿನ ಅಂಶವನ್ನು ಹುಲ್ಲುಗಾವಲು ಪ್ರದೇಶಕ್ಕೆ ಬಿಟ್ಟು ಹುಲುಸಾದ ಫಲ ಪಡೆಯುತ್ತಿದ್ದಾರೆ. ಮುಸ್ತಫಾ ಹೈನುಗಾರಿಕೆ ಬಗ್ಗೆ ಬಹಳಷ್ಟು ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಸಂಶೋಧನೆ ಕೂಡಾ ನಡೆಸುತ್ತಿದ್ದಾರೆ.
48 ರ ಹರೆಯದ ಗೋಳ್ತಮಜಲು ಅಹ್ಮದ್ ಮುಸ್ತಫಾ ಅವರದ್ದು ಸಾದು ಸ್ವಭಾವದ ಸರಳ ವ್ಯಕ್ತಿತ್ವ. ವಾಲಿಬಾಲ್ ಮತ್ತು ಕಬಡ್ಡಿಯಲ್ಲಿ ಎತ್ತಿದ ಕೈ. ಹಜಾಜ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಪಾಲುದಾರ. ಹಲವು ಸಂಘ ಸಂಸ್ಥೆಗಳ ಸರದಾರ. ಮಂಗಳೂರಿನ ಎಂ.ಫ್ರೆಂಡ್ಸ್, ಬಂಟ್ವಾಳದ ರೋಟರಿ ಕ್ಲಬ್, ಜೇಸಿಐ ಮೊದಲಾದ ಸೇವಾ ಘಟಕಗಳಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿ. ಜೆಮ್ ಆಂಗ್ಲ ಮಾಧ್ಯಮ ಶಾಲೆಯ ಟ್ರಸ್ಟಿ. ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಹಜಾಜ್ ಸ್ಪೋರ್ಟ್ಸ್ ಕ್ಲಬ್ನ ಜನಕ. ಬಿಡುವಿಲ್ಲದ ಉದ್ಯಮ ಹಾಗೂ ಸಮಾಜಸೇವೆಯ ಮಧ್ಯೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಮಾತ್ರ ಗ್ರೇಟ್. ಹೈನುಗಾರಿಕೆಯನ್ನು ಉದ್ಯಮವಾಗಿ ಲಾಭಕ್ಕೆ ಸ್ವೀಕರಿಸದೆ ಹವ್ಯಾಸವಾಗಿ ಮುಂದುವರಿಸಿದ್ದು ವಿಶೇಷವೇ ಸರಿ. ಇವರ ಈ ಸಾಹಸಕ್ಕೆ 2015-16 ರ ಬಂಟ್ವಾಳ ತಾಲೂಕಿನ ಅತ್ಯುತ್ತಮ ಹೈನುಗಾರ ಪ್ರಶಸ್ತಿ ದೊರಕಿದೆ. ಹತ್ತು ಸಾವಿರ ರೂ. ನಗದು ಮತ್ತು ಪ್ರಶಸ್ತಿ ಸ್ಮರಣಿಕೆಗೆ ಅವರು ಭಾಜನರಾಗಿದ್ದಾರೆ. ಕರಾವಳಿಯಲ್ಲಿ ಗೋವಿನ ವಿಷಯದಲ್ಲಿ ತಂಟೆ ತಕರಾರು ಎಬ್ಬಿಸುವವರು, ಕನಿಕರ ತೋರುವವರು ಎಷ್ಟು ಮಂದಿ ಮನೆಯಲ್ಲಿ ದನಕರು ಸಾಕುತ್ತಾರೋ ಗೊತ್ತಿಲ್ಲ. ಆದರೆ ಅವರೆಲ್ಲಾ ಒಮ್ಮೆ ಮುಸ್ತಫಾರ ಹಟ್ಟಿಗೆ ಹೋಗಿ ಅವರ ಗೋ ಪ್ರೇಮವನ್ನು ನೋಡಿ ಶಹಬ್ಬಾಸ್ ಹೇಳಿ ಬರುವುದು ಒಳಿತು.
ರಶೀದ್ ವಿಟ್ಲ.







