ಹಜ್ ಸೇವೆಗೆ ಕೆಸಿಎಫ್ ಮತ್ತು ಐಸಿಎಫ್‌ನಿಂದ 1,100 ಸ್ವಯಂಸೇವಕರ ತಂಡ ಸಜ್ಜು

ರಿಯಾದ್, ಸೆ.8: ಜಗತ್ತಿನ ವಿವಿಧ ದೇಶಗಳಿಂದ ಪವಿತ್ರ ಹಜ್ ಕರ್ಮ ನಿರ್ವಹಿಸುವ ಸಲುವಾಗಿ ಸೌದಿ ಅರೆಬಿಯದ ಮಕ್ಕಾ ಹಾಗೂ ಮದೀನಾಗಳಿಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಕನ್ನಡದ ಅನಿವಾಸಿ ಸಂಘಟನೆ ಕೆಸಿಎಫ್ ಮಾದರಿಯುತ ಸೇವೆಯನ್ನು ನೀಡುತ್ತಿದೆ. ವರ್ಷಂಪ್ರತಿ ’ಹಜ್’ ಯಾತ್ರಾರ್ಥಿಗಳ ಆಗಮನದಲ್ಲಿ ಹೆಚ್ಚಳವಾಗುತ್ತಿದ್ದು ಈ ಪ್ರಮಾಣವನ್ನು ಗಮನದಲ್ಲಿರಿಸಿಕೊಂಡು ಸೌದಿ ಪ್ರವಾಸೋದ್ಯಮ ಇಲಾಖೆ, ಹಜ್ ನಿವರ್ಹಣಾ ಇಲಾಖೆ, ಗೃಹ ಹಾಗೂ ವಿದೇಶಾಂಗ ಸಚಿವಾಲಯಗಳನ್ನೊಳಗೊಂಡಂತೆ ಇಡೀ ಆಡಳಿತ ಯಂತ್ರವೇ ಹಜ್ಜಾಜ್ಗಳ ಸೇವೆಗಾಗಿ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಯಾತ್ರಾರ್ಥಿಗಳ ಸಣ್ಣ ಪುಟ್ಟ ಸಮಸ್ಯೆಗಳನ್ನು ನೀಗಿಸುವ ಮೂಲಕ ಅವರಿಗೆ ಅಳಿಲ ಸೇವೆಯನ್ನು ನೀಡುವ ಕನ್ನಡದ ಅನಿವಾಸಿ ಸಂಘಟನೆ, ಕರ್ನಾಟಕ ಕಲ್ಚರ್ ಫೌಂಡೇಶನ್ (ಕೆಸಿಎಫ್)ನ ಕಾರ್ಯಕರ್ತರು ಮಾಡುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಂಘಟನೆಯ ಅಂತಾಷ್ಟ್ರೀಯ ಕಾರ್ಯಕಾರಿಣಿಯ ನಿರ್ದೇಶನದಂತೆ ’ಹಜ್’ ಸೇವೆಗಾಗಿಯೇ ’ಹಜ್ ವಾಲೆಂಟೇರ್ ಖೋರ್’ ಎಂಬ ವಿಶೇಷ ಸಮಿತಿಯೊಂದನ್ನು ಕಳೆದ ಸಾಲಿನ ’ಹಜ್’ ಅವಧಿಯಲ್ಲಿ ರಚಿಸಲಾಗಿದ್ದು, ಕೆಸಿಎಫ್ ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗದ ಸಂಚಾಲಕ ಸಲೀಂ ಕನ್ಯಾಡಿ ನೇತೃತ್ವದ ಸುಮಾರು ನೂರು ಮಂದಿಯನ್ನೊಳಗೊಂಡ ತರಬೇತಿ ಪಡೆದ ತಂಡವೊಂದನ್ನು ಮಕ್ಕಾಗೆ ಕಳಿಸಿಲಾಗಿತ್ತು. ನೂರಾರು ಮಂದಿಯ ಜೀವ ಹಾನಿಗೆ ಕಾರಣವಾದ ಕಳೆದ ಸಾಲಿನ ಮೀನಾ ದುರಂತದ ಸಂದರ್ಭದಲ್ಲಿ ಕೆಸಿಎಫ್ ಸ್ವಯಂಸೇವರು ಸಲ್ಲಿಸಿದ ಸೇವೆಗೆ ಸೌದಿ ಸರಕಾರದ ಆರೋಗ್ಯ ಇಲಾಖೆಗೊಳಪಟ್ಟ ನ್ಯೂ ಮಿನಾ ಹಾಸ್ಪಿಟಲ್ ಆಡಳಿತ ಮಂಡಳಿಯು ಕೆಸಿಎಫ್ ತಂಡಕ್ಕೆ ಅಭಿನಂದನಾ ಪತ್ರ ನೀಡಿ ಗೌರವಿಸಿದೆ.
ಕಳೆದ ಬಾರಿ ಹಜ್ ನ ವಿಧಿವಿಧಾನಗಳು ಆರಂಭಗೊಳ್ಳುವ ’ದುಲ್ ಹಜ್’ ಒಂಬತ್ತರಿಂದ ಮೂರು ದಿನಗಳು ಮಾತ್ರ ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಕೆಸಿಎಫ್ ತಂಡ, ಈ ಬಾರಿ ಭಾರತೀಯ ಹಜ್ ಯಾತ್ರಿಕರ ಮೊದಲ ತಂಡ, ಮದೀನಾ ಹಾಗು ಮಕ್ಕಾ ತಲುಪಿದಾಗಲೇ ಸಕಲ ಸಿದ್ಧ ತೆಗಳೊಂದಿಗೆ ಅವರಿಗೆ ಸೇವೆ ನೀಡುತ್ತಿದೆ. ಕಳೆದ ನಾಲ್ಕು ವರ್ಷಗಳ ಹಿಂದೆಯಷ್ಟೆ ದುಬೈನಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಕಲ್ಚರ್ ಫೌಂಡೇಶನ್ಗೆ ಇದೀಗ ಜಿಸಿಸಿಯಾದ್ಯಂತ ನೂರಾರು ಘಟಕಗಳೊನ್ನೊಳಗೊಂಡಂತೆ ಸರಿ ಸುಮಾರು 12 ಸಾವಿರದಷ್ಟು ಮಂದಿ ಸದಸ್ಯರು ಇದ್ದಾರೆ. ಸೌದಿ ಅರೆಬಿಯ ಸೇರಿದಂತೆ ಜಿಸಿಸಿ ಸದಸ್ಯ ದೇಶಗಳಾದ ಯುಎಇ ಬಹ್ರೈನ್, ಕುವೈಟ್, ಒಮಾನ್ ಹಾಗೂ ಕತಾರ್ ಸೇರಿದಂತೆ ಮಲೇಷ್ಯಾದಲ್ಲೂ ಘಟಕಗಳನ್ನು ಹೊಂದಿದೆ. ಕೊಲ್ಲಿ ವಲಯದಲ್ಲಿ ತನ್ನ ಮುಖವಾಣಿ ’’ಗಲ್ಫ್ ಇಶಾರ’’ ದ ಮುದ್ರಣ ?ರಂಭಿಸುವ ಮೂಲಕ ಇಡೀ ಗಲ್ಫ್ ಪ್ರಾಂತ್ಯದ ಮೊದಲ ಕನ್ನಡ ಪತ್ರಿಕೆಗೆ ನಾಂದಿ ಹಾಡಿದ ಹೆಗ್ಗಳಿಕೆಗೂ ಅದು ಪಾತ್ರವಾಗಿದೆ.
ಈ ಬಾರಿ ಕೆಸಿಎಫ್ ಮತ್ತು ಐಸಿಎಫ್ ನ ಸುಮಾರು 1100 ಸ್ವಯಂ ಸೇವಕರು ಸಲೀಂ ಕನ್ಯಾಡಿ ಮತ್ತು ಫೈಝಲ್ ಕೃಷ್ಣಾಪುರ ಅವರ ನೇತೃತ್ವದಲ್ಲಿ ’’ದುಲ್ ಹಜ್’ 9ರಿಂದ 12ರವರೆಗೆ ಮಿನಾ ಹಾಗೂ ಮಕ್ಕಾ ಪರಿಸರದಲ್ಲಿ ಸೇವೆಗೆ ಲಭ್ಯವಿದ್ದು, ಹಜ್ಜಾಜಿಗಳು ವಿಶೇಷವಾಗಿ ಕನ್ನಡಿಗ ಯಾತ್ರಿಕರು ಸ್ವಯಂಸೇವಕರ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೆಬಿಯದ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ. ಯೂಸುಫ್ ಸಖಾಫಿ ಬೈತಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವರದಿ: ಹಕೀಂ ಬೋಳಾರ್







