ಗೋಮಾಂಸ ತಪಾಸಣೆ ಪೊಲೀಸರ ಕರ್ತವ್ಯ ಹರ್ಯಾಣ ಸಚಿವನ ಸಮರ್ಥನೆ

ಮೆವಾತ್, ಸೆ.8: ಈದ್ ಹಬ್ಬಕ್ಕೆ ಕೆಲವೇ ದಿನಗಳಿರುವಂತೆಯೇ ಹರ್ಯಾಣದ ಮೆವಾತ್‌ನ ಪೊಲೀಸರು ಪಟ್ಟಣದಲ್ಲಿ ತಿರುಗಾಡಿ ಬಿರಿಯಾನಿ ಸಂಗ್ರಹಿಸ ತೊಡಗಿದ್ದಾರೆ. ಅದನ್ನವರು ತಿನ್ನುವುದಕ್ಕಾಗಿ ಸಂಗ್ರಹಿಸುತ್ತಿಲ್ಲ. ಬದಲಿಗೆ, ಅದರಲ್ಲಿ ಗೋಮಾಂಸವಿದೆಯೇ ಎಂಬುದನ್ನು ಪರಿಶೀಲಿಸಲು ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ.
ರಾಜ್ಯದ ಸಚಿವ ಅನಿಲ್ ವಿಜ್, ಪೊಲೀಸರ ಈ ಅಸಹಜ ಕಾರ್ಯಾಚರಣೆಯನ್ನು ಗುರುವಾರ ಸಮರ್ಥಿಸಿದ್ದಾರೆ. ಪೊಲೀಸರು ಕಾನೂನು ಜಾರಿಯ ಹೊಣೆಗಾರರಾಗಿದ್ದಾರೆ. ಭಾರತದಲ್ಲಿ ಕಾನೂನು ಬಾಹಿರವಾಗಿರುವ ಗೋಮಾಂಸವನ್ನು ಭಕ್ಷಿಸದಂತೆ ತಡೆಯುವುದು ಅವರ ಕರ್ತವ್ಯದ ಭಾಗವಾಗಿದೆಯೆಂದು ಅವರು ಹೇಳಿದ್ದಾರೆ.
ಬಕ್ರೀದ್‌ನಂತಹ ಹಬ್ಬಗಳೆಂದರೆ, ರಾಜ್ಯದ ಏಕೈಕ ಮುಸ್ಲಿಂ ಪ್ರಾಬಲ್ಯದ ಜಿಲ್ಲೆಯಾಗಿರುವ ಮೆವಾತ್‌ನ ಸುಮಾರು 10 ಸಾವಿರದಷ್ಟು ರಸ್ತೆ ಬದಿಯ ಬಿರಿಯಾನಿ ಮಾರಾಟಗಾರರು ಹಾಗೂ ರೆಸ್ಟೊರೆಂಟ್ ಮಾಕಲರಿಗೆ ಭಾರೀ ವ್ಯಾಪಾರದ ದಿನಗಳಾಗಿರುತ್ತವೆ. ಆದರೆ, ಈ ಅಭೂತಪೂರ್ವ ತಪಾಸಣೆ ಅವರ ಜಂಘಾ ಬಲವನ್ನೇ ಉಡುಗಿಸಿದೆ.
ಹರ್ಯಾಣದ ಗೋ ಕಲ್ಯಾಣ ಅಯೋಗದ ಮುಖ್ಯಸ್ಥ ಭಣಿ ರಾಮ್ ಮಂಗ್ಲಾ ಮಂಗಳವಾರ ಮೆವಾತ್‌ಗೆ ಭೇಟಿ ನೀಡಿ, ಗೋ ಮಾಂಸದ ಬಿರಿಯಾನಿ ಮಾರಾಟ ಮಾಡದಂತೆ ಖಚಿತಪಡಿಸಲು ಪೊಲೀಸರಿಗೆ ಸೂಚನೆ ನೀಡಿದ್ದರು.
ಇಲ್ಲಿ ಗೋಮಾಂಸವನ್ನೊಳಗೊಂಡ ಬಿರಿಯಾನಿಯನ್ನು ಮಾರಲಾಗುತ್ತಿದೆಯೆಂಬ ಹಲವು ದೂರುಗಳು ತನಗೆ ಬಂದಿವೆಯೆಂದು ಆಯೋಗ ಹೇಳಿದೆ.
ಗ್ರಾಮಗಳಲ್ಲಿ ಮಾರುವ ಬಿರಿಯಾನಿಯ ಮಾದರಿಗಳನ್ನು ಸಂಗ್ರಹಿಸಿ, ಅದಕ್ಕೆ ಬಳಸಲಾದ ಮಾಂಸದ ತಪಾಸಣೆ ನಡೆಸುವಂತೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆಯೆಂದು ಗೋ ರಕ್ಷಣೆಯ ವಿಶೇಷ ಕಾರ್ಯಪಡೆಯ ಪೊಲೀಸ್ ಅಧಿಕಾರಿ ಭಾರತಿ ಆರೋರಾ ತಿಳಿಸಿದ್ದಾರೆ.
ಸರಕಾರದ ಈ ಕ್ರಮ ವಿಪಕ್ಷಗಳಿಂದ ಭಾರೀ ಟೀಕೆಗೊಳಗಾಗಿದೆ. ರಾಜ್ಯದ ಬಿಜೆಪಿ ಸರಕಾರವು ಭಯದ ವಾತಾವರಣ ಸೃಷ್ಟಿಸುತ್ತಿದೆ. ಮೆವಾತ್‌ನ ಜನ ದನಗಳ ಕಳ್ಳ ಸಾಗಣೆ ಹಾಗೂ ವಧೆಯಲ್ಲಿ ಒಳಗೊಂಡಿಲ್ಲ. ಸರಕಾರವು ಕೂಡಲೇ ಬಿರಿಯಾನಿ ಮಾದರಿ ಸಂಗ್ರಹವನ್ನು ನಿಲ್ಲಿಸಬೇಕೆಂದು ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್ ಚೌತಾಲಾರ ಐಎನ್‌ಎಲ್‌ಡಿಯ ಶಾಸಕ ಝಾಕಿರ್ ಹುಸೇನ್ ಆಗ್ರಹಿಸಿದ್ದಾರೆ.
ಹರ್ಯಾಣದಲ್ಲಿ ಕಠಿಣವಾದ ಗೋಸಂರಕ್ಷಣ ಕಾಯ್ದೆ ಜಾರಿಯಲ್ಲಿದ್ದು, ಗೋವಧೆಗೆ 10 ವರ್ಷ ಹಾಗೂ ಗೋಮಾಂಸ ಮಾರಾಟಕ್ಕೆ 5 ವರ್ಷ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ.





