ಕರ್ನಾಟಕ ಬಂದ್ ಹಿನ್ನೆಲೆ: ದ.ಕ., ಉಡುಪಿ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಖಾಸಗಿ ಬಸ್‌ಗಳ ಸಂಚಾರ ಅಬಾಧಿತ

ಮಂಗಳೂರು, ಸೆ.8: ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ವಿರೋಧಿಸಿ ನಡೆಯಲಿರುವ ಕರ್ನಾಟಕ ಬಂದ್‌ನ ಹೊರತಾಗಿಯೂ, ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ಬಸ್‌ಗಳು ಸಂಚರಿಸಲಿವೆ.
ಆದರೆ ಬಂದ್‌ನ ಹಿನ್ನೆಲೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್, ಮತ್ತು ಉಡುಪಿ ಜಿಲ್ಲಾಧಿಕಾರಿ ವೆಂಕಟೇಶ್ ಆದೇಶ ನೀಡಿದ್ದಾರೆ.
‘‘ಗಣೇಶೋತ್ಸವ ಸಂಭ್ರಮ ಹಾಗೂ ಶಾಲಾ ಕಾಲೇಜುಗಳಲ್ಲಿ ನಡೆಯುತ್ತಿರುವ ಪರೀಕ್ಷೆಗಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಬಾರದಂಬ ಕಾರಣಕ್ಕೆ ನಾಳೆ ಖಾಸಗಿ ಬಸ್ಸುಗಳು ಎಂದಿನಂತೆ ಸಂಚರಿಸಲಿವೆ. ಕಾವೇರಿ ನದಿ ಹಾಗೂ ರೈತರ ಬಗ್ಗೆ ನಮಗೆ ಸಹಾನುಭೂತಿ ಇದೆ. ಹಾಗಾಗಿ ಬಂದ್ ವಿರೋಧಿಸಿ ಈ ಕ್ರಮಕ್ಕೆ ತಾವು ಮುಂದಾಗಿಲ್ಲ’’ ಎಂದು ದ.ಕ. ಜಿಲ್ಲಾ ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಪತ್ರಿಕೆಗೆ ತಿಳಿಸಿದ್ದಾರೆ.
ಹೊರ ಜಿಲ್ಲೆಗಳಿಗೆ ಹೊರಡುವ ಕೆಎಸ್ಸಾರ್ಟಿಸಿ ಬಸ್ಸುಗಳ ಓಡಾಟ ಸ್ಥಗಿತ
ನಗರದ ಬಿಜೈ ಕೆಎಸ್ಸಾರ್ಟಿಸಿಯಿಂದ ಜಿಲ್ಲೆಯೊಳಗೆ ಸಂಚರಿಸುವ ಬಸ್ಸುಗಳ ಓಡಾಟ ಮುಂದುವರಿಯಲಿದ್ದು, ಹೊರ ಜಿಲ್ಲೆಗಳ ಬಸ್ಸು ಸಂಚಾರವನ್ನು ಪರಿಸ್ಥಿತಿ ನೋಡಿ ನಿರ್ಧರಿಸುವುದಾಗಿ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ ಸ್ಥಳೀಯವಾಗಿ ಕೆಎಸ್ಸಾರ್ಟಿಸಿ ಬಸ್ಸುಗಳು ಸಂಚಾರ ಪ್ರಾರಂಭಿಸಲಿದೆ. ಆದರೆ, ಉಡುಪಿ-ಮಂಗಳೂರು ಹೊರತುಪಡಿಸಿ ಬೆಂಗಳೂರು, ಮಂಡ್ಯ, ಹಾಸನ, ಕಾರವಾರ ಮೊದಲಾದ ಕಡೆಗಳಲ್ಲಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಸಂಚಾರ ಆರಂಭಿಸುವುದಾಗಿ ಅವರು ತಿಳಿಸಿದ್ದಾರೆ.







