ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸರಕಾರಿ ಕಚೇರಿಗಳು ಬಂದ್?

ಬೆಂಗಳೂರು, ಸೆ. 8: ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಸೆ.9 ಕರ್ನಾಟಕ ಬಂದ್‌ಗೆ ಸರಕಾರಿ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಸರಕಾರಿ ಕಚೇರಿಗಳು ಬಂದ್ ಆಗುವುದು ಖಚಿತವಾಗಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್ ಬಂಕ್, ಹೋಟೆಲ್, ಸಾರಿಗೆ ಸೇವೆಗಳು ಸ್ಥಗಿತಗೊಳ್ಳುವುದರಿಂದ ಸಿಬ್ಬಂದಿಯ ಹಾಜರಾತಿಯ ಕೊರತೆಯಿಂದ ಸರಕಾರಿ ಕಚೇರಿಗಳ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ.
ಕರ್ನಾಟಕ ಬಂದ್‌ಗೆ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಬಹುಪಾಲು ಸಂಚಾರ ಇರುವುದಿಲ್ಲ. ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಮಾಲಕರ ಸಂಘದ 60 ಸಾವಿರ ಟ್ಯಾಕ್ಸಿ ಚಾಲಕರು ಕಾರ್ಯನಿರ್ವಹಿಸುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಕೆಂಪೇಗೌಡ ವಿಮಾನನಿಲ್ದಾಣಕ್ಕೆ ಯಾವುದೇ ಕ್ಯಾಬ್ಗಳು ಸಂಚರಿಸುವುದಿಲ್ಲ. ಇದರ ಪರಿಣಾಮವಾಗಿ ಸರಕಾರಿ ಕಚೇರಿಗಳ ಕಾರ್ಯಚಟುವಟಿಕೆಗಳು ಕೂಡಾ ಸ್ತಬ್ಧಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.







