ಉತ್ತಮ ಶಿಕ್ಷಕರು ಆದರ್ಶ ಸಮಾಜದ ಶಿಲ್ಪಿಗಳು: ಶಾಸಕ ಸತೀಶ ಸೈಲ್
ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ಅಂಕೋಲಾ, ಸೆ.8: ಉತ್ತಮ ಶಿಕ್ಷಕರು ಆದರ್ಶ ಸಮಾಜದ ಶಿಲ್ಪಿಗಳಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭೆಗಳ ಹಿಂದೆ ಜನಪರ ಶಿಕ್ಷಕರ ಕಾಳಜಿ ಕಂಡುಬರುತ್ತದೆ. ಇಂತಹ ಶಿಕ್ಷಕರನ್ನು ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದು ಶಾಸಕ ಸತೀಶ ಸೈಲ್ ಅಭಿಪ್ರಾಯಪಟ್ಟರು.
ಗುರುವಾರ ಪಟ್ಟಣದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಅಂಕೋಲಾ ಅರ್ಬನ್ ಕೋ. ಆಪರೇಟಿವ್ ಬ್ಯಾಂಕ್ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳನ್ನು ಸರಕಾರಿ ಶಾಲೆಗಳಲ್ಲಿ ಓದಿಸಲು ಪೋಷಕರು ಮುಂದಾಗಬೇಕು. ಶಿಕ್ಷಣ ವ್ಯವಸ್ಥೆಯು ವ್ಯಾಪಾರದ ಸರಕ್ಕಾಗಿ ಬದಲಾವಣೆಯಾಗುತ್ತಿರುವುದು ವಿಷಾದನೀಯ ಎಂದು ಅವರು ಹೇಳಿದರು.
ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯರಾದ ಉಷಾ ನಾಯ್ಕ, ಜಗದೀಶ ನಾಯಕ, ಸರಳಾ ನಾಯಕ, ತಾಪಂ ಉಪಾಧ್ಯಕ್ಷೆ ತುಳಸಿ ಗೌಡ, ತಹಶೀಲ್ದಾರ್‌ವಿ.ಜೆ. ಲಾಂಜೇಕರ, ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ರಾಜೇಂದ್ರ ಶೆಟ್ಟಿ, ನಿರ್ದೇಶಕ ನಾಗಾನಂದ ಬಂಟ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಿವೃತ್ತಿಗೊಂಡ ಮತ್ತು ಕಳೆದ ಸಾಲಿನಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಾಧ್ಯಾಪಕ ಪ್ರೋ. ಆರ್.ಎಸ್. ನಾಯಕ ಉಪನ್ಯಾಸ ನೀಡಿದರು. ಪ್ರಬಾರಿ ಶಿಕ್ಷಣಾಧಿಕಾರಿ ಭಾಸ್ಕರ ಗಾಂವಕರ ಮಾತನಾಡಿದರು. ಪ್ರಮುಖರಾದ ವಿ.ಟಿ. ನಾಯಕ, ವಿಜಯ ನಾಯಕ, ನಿತ್ಯಾನಂದ ಗಾಂವಕರ, ಸುರೇಶ ನಾಯಕ, ದೇವರಾಜ ಗೋಳಿಕಟ್ಟೆ ಉಪಸ್ಥಿತರಿದ್ದರು.







