ಸೀಗೆಹೊಸೂರಿನಲ್ಲಿ ಲಾರಿಗಳನ್ನು ತಡೆದು ಪ್ರತಿಭಟನೆ

ಕುಶಾಲನಗರ, ಸೆ.8: ಸಮೀಪದ ಸೀಗೆಹೊಸೂರು ಮದಲಾಪುರ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯವರು ಸರಿಪಡಿಸದ ಹಿನ್ನೆಲೆಯಲ್ಲಿ ಹಾಗೂ ಈ ಮಾರ್ಗವಾಗಿ ಕೋರೆಯಿಂದ ಕಲ್ಲು ತುಂಬಿದ ಲಾರಿಗಳು ಚಲಿಸುವುದರಿಂದ ರಸ್ತೆಯು ತೀರಾ ಹಾಳಾಗಿದೆಂದು ಗ್ರಾಮಸ್ಥರು ಲಾರಿಗಳನ್ನು ತಡೆದು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.
ರಸ್ತೆಗಳು ಹಾಳಾಗಿ ರಸ್ತೆ ಬದಿಯಲ್ಲಿ ವಾಸವಾಗಿರುವ ಕುಟುಂಬಗಳುರಸ್ತೆಯಿಂದ ಏಳುವ ಧೂಳಿನಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ತೆರಳಲು ಸಾಧ್ಯವಾಗದ ಪರಿಸ್ಥಿತಿಗೆ ಬಂದಿದ್ದು, ಸಾರ್ವಜನಿಕರ ತಿರುಗಾಟಕ್ಕೂ ಕಷ್ಟವಾಗಿದೆಂದು ಗ್ರಾಮದ ರಾಜು ತಿಳಿಸಿದ್ದರು. ಗ್ರಾಮಸ್ಥ ಚಿಣ್ಣಪ್ಪಮಾತನಾಡಿ, ದಿನಂಪ್ರತಿ ಬೆಳಗ್ಗೆ 5 ರಿಂದ ಪ್ರಾರಂಭಗೊಂಡು ರಾತ್ರಿ 11 ಗಂಟೆಯವರೆಗೂ ಈ ಮಾರ್ಗದಲ್ಲಿ ಲಾರಿಗಳು ಚಲಿಸುವುದರಿಂದ ರಸ್ತೆಯು ತೀರಾ ಹಾಳಾಗಿದ್ದು, ಇದಕ್ಕೆ ಕಳೆದ ನಾಲ್ಕು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರು ಕಾಮಗಾರಿಗೆ ಹಣ ಬಿಡುಗಡೆಯಾಗಿದೆ ಎಂದು ಭೂಮಿ ಪೂಜೆ ನೆರವೇರಿಸಿ ತೆರಳಿದ್ದರು. ಆದರೆ ಅಧಿಕಾರಿಗಳು ಇದರತ್ತ ಗಮನಹರಿಸದೆ ಮಂಜೂರಾದ ಹಣವನ್ನು ಬೇರೆ ರಸ್ತೆ ಕಾಮಗಾರಿಗೆ ವಿನಿಯೋಗಿಸಿ, ಈ ರಸ್ತೆಯ ಕಾಮಗಾರಿಯನ್ನು ಕೈಬಿಟ್ಟಿರುವ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.





