ಪದ್ಮಭೂಷಣ ಪ್ರಶಸ್ತಿಗೆ ಪಂಕಜ್ ಅಡ್ವಾಣಿ ಹೆಸರು ಶಿಫಾರಸು

ಹೈದರಾಬಾದ್, ಸೆ.8: ಹಿರಿಯ ಸ್ನೂಕರ್ ಪಂಕಜ್ ಅಡ್ವಾಣಿ ಅವರನ್ನು ದೇಶದ ಮೂರನೆ ಅತ್ಯಂತ ಉನ್ನತ ಗೌರವ ಪದ್ಮ ಭೂಷಣ ಪ್ರಶಸ್ತಿಗೆ ಭಾರತದ ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಫೆಡರೇಶನ್(ಬಿಎಸ್‌ಎಫ್‌ಐ) ಗುರುವಾರ ಶಿಫಾರಸು ಮಾಡಿದೆ.
15 ಬಾರಿ ಬಿಲಿಯರ್ಡ್ಸ್ ಹಾಗೂ ಸ್ನೂಕರ್‌ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಅಡ್ವಾಣಿ ಹೆಸರನ್ನು ಕಳೆದ ವರ್ಷವೂ ಶಿಫಾರಸು ಮಾಡಲಾಗಿತ್ತು. ‘‘ನಾವು ಸತತ ಎರಡನೆ ವರ್ಷವೂ ಪಂಕಜ್ ಅಡ್ವಾಣಿ ಅವರನ್ನು ಪದ್ಮ ವಿಭೂಷಣ ಪ್ರಶಸ್ತಿಗೆ ಶಿಫಾರಸು ಮಾಡುತ್ತಿದ್ದೇವೆ. ಅವರು ಆ ಪ್ರಶಸ್ತಿಗೆ ಸೂಕ್ತ ಅಭ್ಯರ್ಥಿ. ಈ ಬಾರಿ ಪ್ರಶಸ್ತಿ ಗಿಟ್ಟಿಸಿಕೊಳ್ಳುವ ವಿಶ್ವಾಸ ನಮಗಿದೆ’’ ಎಂದು ಬಿಎಸ್‌ಎಫ್‌ಐ ಕಾರ್ಯದರ್ಶಿ ಎಸ್. ಬಾಲಸುಬ್ರಮಣಿಯನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಅಡ್ವಾಣಿ ಈಗಾಗಲೇ ಪದ್ಮ ಶ್ರೀ(2009), ಖೇಲ್ ರತ್ನ(2005-06) ಹಾಗೂ ಅರ್ಜುನ ಪ್ರಶಸ್ತಿ(2004)ಗಳಿಗೆ ಭಾಜನರಾಗಿದ್ದಾರೆ.
ಪದ್ಮ ಪ್ರಶಸ್ತಿಗಳಿಗೆ ಶಿಫಾರಸು ಮಾಡಲು ಸೆ.15 ಕೊನೆಯ ದಿನವಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಪ್ರಶಸ್ತಿ ವಿಜೇತರಿಗೆ ಗಣರಾಜ್ಯ ದಿನದಂದು ಗೌರವಿಸಲಾಗುತ್ತದೆ.





