ಕಾಶ್ಮೀರ ಸಮಸ್ಯೆ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದ ಜೆಪಿ

ಜಯಪ್ರಕಾಶ್ ನಾರಾಯಣ್ ಅವರು ಅಂದಿನ ಪ್ರಧಾನಿ ಇಂದಿರಾಗಾಂಯವರಿಗೆ 1966ರ ಜೂನ್ 23ರಂದು ಬರೆದ ಪತ್ರದ ಒಕ್ಕಣೆ ಇದು. ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕು ಎಂದು ಬಯಸುವವರಿಗೆ ಇದು ತೀರಾ ಪ್ರಸ್ತುತ
ಕಾಶ್ಮೀರ ಸಮಸ್ಯೆ ಬಗ್ಗೆ ಪರಾಮರ್ಶೆ ನಡೆಸಲು ಸಿದ್ದೀಕ್ ಹಾಗೂ ಅವರ ಸಹೋದ್ಯೋಗಿಗಳು ನಿಮ್ಮನ್ನು ಭೇಟಿ ಮಾಡುವಂತೆ ಸೂಚಿಸಿರುವ ವಿಚಾರ ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದಾಗ ನನಗೆ ತಿಳಿದು ಬಂತು. ಈ ಸಭೆಯ ಮಹತ್ವದ ಹಿನ್ನೆಲೆಯಲ್ಲಿ ಈ ಸಂಬಂಧದ ಕೆಲವು ಯೋಚನೆಗಳನ್ನು ನಿಮ್ಮ ಜತೆ ಹಂಚಿಕೊಳ್ಳಬಯಸುತ್ತೇನೆ.
ಕಾಶ್ಮೀರ ಸಮಸ್ಯೆ ನಮ್ಮ ದೇಶವನ್ನು 19 ವರ್ಷಗಳಿಂದ ಕಾಡುತ್ತಲೇ ಬಂದಿದೆ. ಭೌತಿಕ ಹಾಗೂ ಆಧ್ಯಾತ್ಮಿಕವಾಗಿ ನಾವು ಅದಕ್ಕೆ ಸಾಕಷ್ಟು ಬೆಲೆ ತೆತ್ತಿದ್ದೇವೆ. ಬಕ್ಷಿ ಸಾಹಿಬ್ ಅವರ ನೇತೃತ್ವದಲ್ಲಿ ನಡೆದ ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳು ಕಾಶ್ಮೀರ ಜನತೆಯ ಆಶೋತ್ತರಗಳನ್ನು ಅಭಿವ್ಯಕ್ತಿಪಡಿಸಿದೆ ಮತ್ತು ಕೆಲ ಪಾಕಿಸ್ತಾನಿ ಪರ ದೇಶದ್ರೋಹಿಗಳನ್ನು ಹೊರತುಪಡಿಸಿದರೆ, ಸಿದ್ದೀಕ್ ಸರಕಾರವು ಜನಬೆಂಬಲವನ್ನು ಹೊಂದಿದೆ ಎಂದು ನಾವು ಅರ್ಥ ಮಾಡಿಕೊಳ್ಳದಿದ್ದರೆ ನಾವು ಪ್ರಜಾಪ್ರಭುತ್ವವನ್ನು ಪ್ರತಿಪಾದಿಸುತ್ತಿದ್ದೂ; ಕಾಶ್ಮೀರಿಗಳ ಮೇಲೆ ಬಲಪ್ರಯೋಗದ ಮೂಲಕ ಅವರನ್ನು ಆಳುತ್ತೇವೆ ಎನ್ನಬೇಕಾಗುತ್ತದೆ.
ಕಾಶ್ಮೀರ ವಿಷಯ ಭಾರತದ ಘನತೆಗೆ ವಿಶ್ವಮಟ್ಟದಲ್ಲಿ ಬಹಳಷ್ಟು ಧಕ್ಕೆ ತಂದಿದೆ. ಕೆಲ ದೇಶಗಳು ತಮ್ಮದೇ ಕಾರಣಕ್ಕೆ ನಮಗೆ ಬೆಂಬಲ ನೀಡುತ್ತಿದ್ದರೂ, ರಶ್ಯಾ ಸೇರಿದಂತೆ ವಿಶ್ವದ ಯಾವ ದೇಶವೂ ನಮ್ಮ ಕಾಶ್ಮೀರ ನೀತಿಯನ್ನು ಒಪ್ಪುವುದಿಲ್ಲ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ; ಆದ್ದರಿಂದ ಕಾಶ್ಮೀರ ಸಮಸ್ಯೆಯೇ ಅಲ್ಲ ಎಂದು ನಾವು ಎಷ್ಟೇ ದೊಡ್ಡದಾಗಿ, ಎಷ್ಟು ದೀರ್ಘ ಅವಯಿಂದ ಬೊಬ್ಬೆ ಹೊಡೆದರೂ, ಕಾಶ್ಮೀರ ಸಮಸ್ಯೆಯು, ದೇಶ ಎದುರಿಸುತ್ತಿರುವ ತೀರಾ ಗಂಭೀರ ಹಾಗೂ ತುರ್ತು ಸಮಸ್ಯೆಯಾಗಿದೆ. ಈ ಕಣಿವೆ ರಾಜ್ಯದ ಆಗುಹೋಗುಗಳ ಬಗ್ಗೆ ದೇಶದ ಜನರನ್ನು ನಾವು ಕತ್ತಲಲ್ಲಿ ಇಡಬಹುದಾದರೂ, ದಿಲ್ಲಿಯಲ್ಲಿರುವ ಪ್ರತಿ ವಿದೇಶಿ ರಾಯಭಾರ ಕಚೇರಿಗೆ ಕೂಡಾ ವಾಸ್ತವದ ಅರಿವು ಇದೆ. ಪ್ರತಿ ವಿದೇಶಿ ಬಾತ್ಮೀದಾರರಿಗೆ ಈ ಬಗ್ಗೆ ಮಾಹಿತಿ ಇದೆ.
ಸಿದ್ದೀಕ್ ಸಾಹಿಬ್ ಅಥವಾ ಮೀರ್ ಕಾಸಿಂ ಸಾಹಿಬ್ ಅವರು ಕಣಿವೆಯಲ್ಲಿ ಒಂದಲ್ಲ ಒಂದು ದಿನ ಮನಃಶಾಸೀಯ ಕ್ರಾಂತಿಯ ಪವಾಡ ಮಾಡುತ್ತಾರೆ ಎಂಬ ನಿರೀಕ್ಷೆಯನ್ನಷ್ಟೇ ನಾವು ಇಟ್ಟುಕೊಳ್ಳಬಹುದು. ನನ್ನ ಪ್ರಕಾರ, ಐತಿಹಾಸಿಕ ಘಟನಾವಳಿಗಳ ಕಾರಣದಿಂದ, ಇದು ಪ್ರಜಾಸತ್ತಾತ್ಮಕ ಹಾಗೂ ಜಾತ್ಯತೀತ ತತ್ವಗಳ ಅನ್ವಯ ಎಷ್ಟು ನ್ಯಾಯಬದ್ಧ ಹಾಗೂ ನಿಷ್ಪಕ್ಷಪಾತ ಎನ್ನುವುದಕ್ಕಿಂತಲೂ ರಾಜ್ಯದ ಯಾವುದೇ ಭಾಗವನ್ನು ಪ್ರವೇಶಿಸದಿರುವುದು ಈಗ ಕಾರ್ಯಸಾಧುವಲ್ಲ. ಕಾಶ್ಮೀರ ಸಮಸ್ಯೆಯ ಯಾವುದೇ ಪರಿಹಾರವೂ ಪ್ರವೇಶದ ಹಕ್ಕಿನ ಇತಿಮಿತಿಯಲ್ಲೇ ಇರಬೇಕು. ಇಲ್ಲಿ ಶೇಕ್ ಸಾಹಿಬ್ ಅವರ ಪಾತ್ರ ಪ್ರಮುಖವಾಗುತ್ತದೆ. ಅವರ ವಿರುದ್ಧದ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಲು ಅವಕಾಶ ನೀಡದೇ ಅವರನ್ನು ಬಂಸಿರುವುದು ನ್ಯಾಯಸಮ್ಮತವಲ್ಲ. ಅವರು ದೇಶದ್ರೋಹಿ ಎಂದು ನನಗೆ ಅನ್ನಿಸುವುದಿಲ್ಲ. ಗೋಡ್ಸೆ, ಗಾಂೀಜಿಯನ್ನು ದೇಶದ್ರೋಹಿ ಎಂದು ಪರಿಗಣಿಸಿದರು.
ಜಯಪ್ರಕಾಶ್ ನಾರಾಯಣ್ ಅವರು ದೇಶದ್ರೋಹಿ ಎಂದು ಆರೆಸ್ಸೆಸ್ ಯೋಚಿಸುತ್ತದೆ. ಕಾನೂನು ಪ್ರಕ್ರಿಯೆಯನ್ನು ಅನುಸರಿಸದೆ ಯಾರನ್ನೂ ದೇಶದ್ರೋಹಿ ಎಂದು ಭಾರತ ಸರಕಾರ ಪರಿಗಣಿಸಲು ಸಾಧ್ಯವಿಲ್ಲ. ಚೌವೆನ್‌ಲಾಯ್ ಅವರನ್ನು ಶೇಕ್ ಭೇಟಿ ಮಾಡಿರುವುದು ಅಚಾತುರ್ಯ. ಆ ಬಗ್ಗೆ ಅಷ್ಟೇ ಹೇಳಲು ಸಾಧ್ಯ. ಅದು ತಾರ್ಕಿಕ ಕ್ರಮ ಎಂದು ಯಾವ ನಿಷ್ಪಕ್ಷಪಾತ ಮನಸ್ಸು ಕೂಡಾ ಭಾವಿಸಲಾರದು. ಚೀನಾ 1962ರಲ್ಲಿ ಆಕ್ರಮಣ ನಡೆಸಿದಾಗ, ತಮ್ಮ ಆಕ್ರೋಶ ವ್ಯಕ್ತಪಡಿಸಿ, ಪ್ರಧಾನಿಗೆ ಪತ್ರ ಬರೆದಿರಲಿಲ್ಲವೇ? 1964ರ ಮೇ 25ರಂದು ರಾವಲ್ಪಿಂಡಿಯಲ್ಲಿ ಚೌಧರಿ ಗುಲಾಂ ಅಬ್ಬಾಸ್, ಚೀನಾ ಮಧ್ಯಸ್ಥಿಕೆಯನ್ನು ಪ್ರತಿಪಾದಿಸಿದಾಗ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಲಿಲ್ಲವೇ? ಲಡಾಕ್ ಮೇಲೆ ಚೀನಾದ ಹಕ್ಕುಪ್ರತಿಪಾದನೆ ಸಮರ್ಥನೀಯವಲ್ಲ ಎಂದು ಅವರು ಲಂಡನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ (ಟೈಮ್ಸ್, ಮಾರ್ಚ್ 19, 1965). ಹೇಳಿರಲಿಲ್ಲವೇ? ಶೇಕ್ ಸಾಹಿಬ್ ಅವರು ವಿದೇಶದಲ್ಲಿ ನೀಡಿರುವ ಹೇಳಿಕೆಗಳ ಬಗ್ಗೆ ಪ್ರಸ್ತಾಪಿಸುವುದಾದರೆ, ಶೇಕ್ ಮಾತು ಕಡಿಮೆ ಮಾಡಬೇಕಿತ್ತು ಹಾಗೂ ಹೆಚ್ಚು ತೂಕದ ಮಾತುಗಳನ್ನು ಆಡಬೇಕಿತ್ತು ಎಂದು ನಾನೂ ಭಾವಿಸುತ್ತೇನೆ. ಆದರೆ ಶೇಖ್ ಸಾಹಿಬ್ ಬಾಯಿಮುಚ್ಚಿ ಕುಳಿತುಕೊಳ್ಳಬೇಕು ಎಂದು ನಿರೀಕ್ಷಿಸುವಂತಿಲ್ಲ. ಇದು ನಮ್ಮ ಭಾರತೀಯರ ಸಾಮಾನ್ಯ ಭಾವನೆ. 1965ರಲ್ಲಿ ವಿದೇಶ ಪ್ರವಾಸಕ್ಕೆ ಹೊರಡುವ ಮುನ್ನ ಅವರು ಹೇಳಿದ ಇನ್ನೊಂದು ಮಾತನ್ನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ನಮ್ಮ ಮಧ್ಯೆ ಭಿನ್ನಾಭಿಪ್ರಾಯಗಳು ಇರಬಹುದು; ಆದರೆ ಭಾರತ ನಮ್ಮೆಲ್ಲರ ಮಾತೃಭೂಮಿ. ಆದರೆ ಭಾರತ ಭಾರತವಾಗಿಯೇ ಉಳಿಯದಿದ್ದರೆ ಯಾರಿಂದ ತಾನೇ ರಕ್ಷಿಸಲು ಸಾಧ್ಯ? ನಾವು ಈ ಸಮಸ್ಯೆಯನ್ನು ಈ ದೃಷ್ಟಿಕೋನದಿಂದ ನೋಡಬೇಕು
ಶೇಕ್ ಅಬ್ದುಲ್ಲಾ ಅವರ ಬಿಡುಗಡೆಗೆ ನಾನು ಒತ್ತಾಯಿಸುತ್ತಲೇ ಇದ್ದೇನೆ. ಯಾವುದಾದರೂ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸಾಧ್ಯವಾಗುವುದಾದರೆ ಅದು ಶೇಕ್ ಅಬ್ದುಲ್ಲಾ ಅವರ ನೆರವಿನಿಂದ ಮಾತ್ರ. ಆದರೆ ಈ ಬಗ್ಗೆ ನನಗೆ ಶೇ. 100ರಷ್ಟು ಖಾತ್ರಿ ಇಲ್ಲ. ಆದರೆ ಶೇಕ್ ಅಬ್ದುಲ್ಲಾ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಲು ಆಗ್ರಹಿಸಲು ಪೂರಕವಾದ ಹಲವು ಕಾರಣಗಳಿವೆ. ಇದರಲ್ಲಿ ಸ್ವಲ್ಪಮಟ್ಟಿನ ಅಪಾಯ ಸಾಧ್ಯತೆಯೂ ಇದೆ. ಆದರೆ ಯಾವುದೇ ರಾಜಕೀಯ ಹಾಗೂ ಸೇನಾ ನಿರ್ಧಾರಗಳಲ್ಲೂ ಈ ಸಾಧ್ಯತೆ ಇದ್ದೇ ಇದೆ. ಇಬ್ಬರು ಮದುವೆಯಾಗಲು ಬಯಸುವುದೂ ಸೇರಿದಂತೆ ಬಹುತೇಕ ನಿರ್ಧಾರಗಳಲ್ಲಿ ಈ ಅಪಾಯ ಸಾಧ್ಯತೆ ಇರುತ್ತದೆ.
ಇಲ್ಲಿ ನಾನು ಸ್ವಲ್ಪಮಟ್ಟಿಗೆ ವಿಷಯಾಂತರ ಮಾಡಬಹುದೇ? ನಂದಾಜಿಯವರು ಆರ್.ಕೆ.ಪಟೇಲ್ ಬಳಿ ಮಾತನಾಡುತ್ತಾ, ‘‘ಜಯಪ್ರಕಾಶ್ ಅವರು ಕಾಶ್ಮೀರ ವಿಚಾರದಲ್ಲಿ ಮತ್ತು ಶೇಕ್ ಅಬ್ದುಲ್ಲಾ ವಿಚಾರದಲ್ಲಿ ಸಾರ್ವಜನಿಕ ಭಾವನೆಗಳಿಂದ ಸಂಪೂರ್ಣ ಹೊರಗಿದ್ದಾರೆ’’ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಬಹುಶಃ ನಿಮ್ಮ ಬಹಳಷ್ಟು ಮಂದಿ ಸಹೋದ್ಯೋಗಿಗಳಲ್ಲಿ ಆ ಭಾವನೆ ಇದೆ. ಈ ಹಿನ್ನೆಲೆಯಲ್ಲಿ ಕೆಲ ಅಂಶಗಳನ್ನು ಮುಂದಿಡುತ್ತಿದ್ದೇನೆ. ಮೊಟ್ಟಮೊದಲನೆಯದಾಗಿ ಕೆಲ ವ್ಯಕ್ತಿಗಳು ಜೆಪಿಯವರನ್ನು ಕ್ಷುಲ್ಲಕ ವಿಚಾರವಾದಿ ಅಥವಾ ಗುಪ್ತ ದೇಶದ್ರೋಹಿ ಎಂಬ ಇಮೇಜ್‌ನಿಂದ ಕಾಣುತ್ತಾರೆ. ಆ ವ್ಯಕ್ತಿ ಏನು ಹೇಳಿದರೂ ಆ ಇಮೇಜ್‌ಗೆ ತಕ್ಕಂತೆ ಅದಕ್ಕೆ ಟ್ವಿಸ್ಟ್ ನೀಡುತ್ತಾರೆ. ಉದಾಹರಣೆಗೆ, ನಾನು ನಾಗಾಲ್ಯಾಂಡನ್ನು ನಾಗಾಗಳಿಗೆ ಹಾಗೂ ಕಾಶ್ಮೀರವನ್ನು ಪಾಕಿಸ್ತಾನಿಗಳಿಗೆ ಬಿಟ್ಟುಕೊಡುವಂತೆ ಹೇಳುತ್ತಿದ್ದೇನೆ ಎಂದು ಅವರು ಪ್ರತಿಪಾದಿಸುತ್ತಿದ್ದಾರೆ ಎನ್ನುವುದನ್ನು ತೆಗೆದುಕೊಳ್ಳಿ. ಆದರೆ ಅಂಥದ್ದನ್ನು ನಾನು ಕಲ್ಪಿಸಿಕೊಳ್ಳುವುದೂ ಇಲ್ಲ. ಆದರೆ ಕೆಟ್ಟದಾಗಿ ಬಿಂಬಿಸಲು ಯಾರು ಬೇಕಾದರೂ ಇಂತಹ ಕಲ್ಲು ಎಸೆಯಬಹುದು. ಆದರೆ ಇದರಿಂದ ಜೆಪಿಯವರನ್ನು ಸಾರ್ವಜನಿಕ ಭಾವನೆಗಳಿಂದ ವಿಮುಖಗೊಳಿಸಲಾಗದು.
ನಿಮ್ಮನ್ನು ಹೊರತುಪಡಿಸಿ, ನಿಮ್ಮ ಯಾವ ಸಹೋದ್ಯೋಗಿಗಳೂ ಜನರ ಜತೆ ನನ್ನಂಥ ನೇರ ಸಂಪರ್ಕ ಹೊಂದಿಲ್ಲ ಎಂದು ನಾನು ಧೈರ್ಯವಾಗಿ ಹೇಳಬಲ್ಲೆ. ಸಾಮಾನ್ಯ ಪ್ರತಿದಿನ ನಾನು ಸಾರ್ವಜನಿಕ ಭಾಷಣ ಮಾಡುತ್ತೇನೆ. ಪ್ರತಿ ಬಾರಿಯೂ ಗುಂಪು ನಿಶ್ಶಬ್ದವಾಗಿರುತ್ತದೆ. ಆ ಬಳಿಕ ಜನ ನನ್ನ ಬಳಿ ಬಂದು ‘‘ಈ ಬಗ್ಗೆ ನಾವು ತಪ್ಪಾಗಿ ಅರ್ಥ ಮಾಡಿಕೊಂಡಿದ್ದೆವು. ನಿಮ್ಮ ವಿಚಾರಕ್ಕೆ ನಮ್ಮ ಬೆಂಬಲ ಇದೆ’’ ಎಂದು ಹೇಳುತ್ತಾರೆ. ನಾನು ಪಶ್ಚಿಮ ಪಾಕಿಸ್ತಾನಕ್ಕೆ ಭೇಟಿ ನೀಡಿ ಬಂದ ಸಂದರ್ಭದಲ್ಲಿ ದಿಲ್ಲಿಯಲ್ಲಿ ನಡೆಸಿದ ಎರಡು ಸಭೆಗಳಿಗೆ ಮಾತ್ರ, ಮುಚ್ಚಿದ ಮನಸ್ಸುಗಳ ಆರೆಸ್ಸೆಸ್ ಹುಡುಗರು ತೊಂದರೆ ಉಂಟು ಮಾಡಿದ್ದರು. ಭಾಷಣದ ಮೂಲಕ ಪ್ರತಿಯೊಬ್ಬರನ್ನೂ ಮನವೊಲಿಸಬಹುದು ಎಂದು ನಾನು ಹೇಳುವುದಿಲ್ಲ. ಆದರೆ, ನಾನು ಪ್ರತಿಪಾದಿಸುವ ವಿಚಾರಗಳು, ಸಾರ್ವಜನಿಕ ಭಾವನೆಗಳಿಂದ ವಿಮುಖವಾಗಿಲ್ಲ ಎಂದು ನಾನು ಪ್ರಾಮಾಣಿಕವಾಗಿ ಹೇಳಬಲ್ಲೆ. ಅಂತಿಮವಾಗಿ ಈ ದೇಶದ ನಾಯಕರು ಜನರಿಗೆ ನ್ಯಾಯ ಒದಗಿಸಿಲ್ಲ. ಜನರಿಗೆ ಉತ್ತಮ ನಾಯಕತ್ವ ನೀಡುವುದು ನಾಯಕರ ಜವಾಬ್ದಾರಿ. ಆದರೆ ಬಹಳಷ್ಟು ಮಂದಿ ಸತ್ಯವನ್ನು ಮಾತನಾಡಲೂ ಸಾಧ್ಯವಾಗದಷ್ಟು ದುರ್ಬಲರು. ನನ್ನ ವಿಚಾರವನ್ನು ಹೇಳುವುದಾದರೆ, ನನಗೆ ಜನರ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಜನ ಹೆಚ್ಚು ಬುದ್ಧಿವಂತರು ಮತ್ತು ಪ್ರಜ್ಞಾವಂತರು. ಅವರಿಗೆ ಎಲ್ಲ ಸತ್ಯಾಂಶಗಳನ್ನು ನೀಡಿದರೆ, ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳಬಲ್ಲರು.
ಈ ಪತ್ರದ ಮುಖ್ಯ ಅಂಶಕ್ಕೆ ಬರುತ್ತೇನೆ. ಶೇಕ್ ಸಾಹಿಬ್ ಅವರ ಬಿಡುಗಡೆಗೆ ನಾನು ಏಕೆ ಮನವಿ ಮಾಡುತ್ತಿದ್ದೇನೆ? ಏಕೆಂದರೆ, ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಅದು ಮಾತ್ರ ನಮಗೆ ಅವಕಾಶ ನೀಡಬಲ್ಲದು. ಕಾಶ್ಮೀರದ ಭವಿಷ್ಯದ ಬಗ್ಗೆ ಕಣಿವೆ ರಾಜ್ಯದ ಮುಸ್ಲಿಮರ ಅಭಿಪ್ರಾಯವನ್ನು ತಿರುಗಿಸಬಲ್ಲ ಸಾಮರ್ಥ್ಯ ಹೊಂದಿರುವ ಏಕೈಕ ನಾಯಕ ಅವರು.
ಈ ಹಂತದಲ್ಲಿ ಹಲವು ಪ್ರಶ್ನೆಗಳು ಉದ್ಭವಿಸುತ್ತವೆ. ಅಂಥ ಸ್ಥಾನಮಾನಕ್ಕೆ ಶೇಕ್ ಒಪ್ಪಿಕೊಳ್ಳುತ್ತಾರೆಯೇ? ಹೌದಾದರೆ, ತಮ್ಮ ನಿಲುವಿನ ಬಗ್ಗೆ ಕಾಶ್ಮೀರದ ಜನತೆಯನ್ನು ಮನವೊಲಿಸಬಲ್ಲರೇ? ಸ್ವಾಯತ್ತ ಕಾಶ್ಮೀರ ದೇಶದಿಂದ ಪ್ರತ್ಯೇಕವಾಗಲು ಇಂದಲ್ಲ ನಾಳೆ ಕಾರಣವಾಗುವುದಿಲ್ಲವೇ? ಶೇಕ್ ಅವರ ಯೋಚನೆ ಬದಲಾಗಿದೆ ಎನ್ನುವುದಕ್ಕೆ ನಂದಾಜಿ ಪುರಾವೆ ಕೇಳುತ್ತಿದ್ದಾರೆ. ಇದು ನನಗೆ ಬಾಲಿಶ ಎನಿಸುತ್ತದೆ. ಜನರು ಹೊಂದಿಕೊಳ್ಳುವಂತೆ ಮಾಡಬೇಕಾದರೆ ಅದಕ್ಕೆ ಅವರನ್ನು ಜೈಲಿನಲ್ಲಿಡುವುದು ಪರಿಹಾರವಲ್ಲ. ಬಹುಶಃ ನಂದ ಅವರಿಗೆ ಬ್ರಿಟಿಷರ ಆಡಳಿತಾವಯಲ್ಲಿ ಭಾರತೀಯ ಜೈಲುಗಳಲ್ಲಿ ಇದು ಅನುಭವಕ್ಕೆ ಬಂದಿರಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ಶೇಕ್ ಅವರ ಬಿಡುಗಡೆಯಾದಲ್ಲಿ, ಅವರನ್ನು ದೇಶದ ರಾಜಕೀಯ ಉದ್ದೇಶಗಳಿಗೆ ಸ್ವಲ್ಪವಾದರೂ ಬಳಸಿಕೊಳ್ಳಬಹುದಲ್ಲವೇ? ಇದಕ್ಕೆ ಪ್ರತಿಯಾಗಿ, ಬಿಡುಗಡೆಯಾದ ತಕ್ಷಣ ಶೇಕ್ ಸಾಹಿಬ್ ಅವರು ಮತ್ತೆ ಭವಿಷ್ಯದ ಕಾಶ್ಮೀರಕ್ಕಾಗಿ, ಕಾಶ್ಮೀರಿಗಳ ಹಕ್ಕುಗಳಿಗಾಗಿ ಮತ್ತೆ ಹೋರಾಡುತ್ತಾರೆ.
ಈ ಹಿನ್ನೆಲೆಯಲ್ಲಿ ನಾವು ಅವರನ್ನು ಪಾಕಿಸ್ತಾನಿ ಏಜೆಂಟ್ ಎಂದು ಹೀಗಳೆಯದಷ್ಟು ಪ್ರಬುದ್ಧತೆಯನ್ನು ನಾವು ಮೆರೆಯಬೇಕಾಗಿದೆ. ಭಾರತದ ಒಳಗೆಯೇ ಸ್ವಾಯತ್ತ ಕಾಶ್ಮೀರ ನಿರ್ಮಾಣದ ಬಗ್ಗೆ ಸ್ಥಳೀಯರನ್ನು ಅವರು ಮನವೊಲಿಸಲು ಸಮರ್ಥರಾಗಬೇಕಾದರೆ, ಅವರನ್ನು ಹೊರತುಪಡಿಸಿ ಇತರ ಯಾರೂ ಆ ನಿರ್ಧಾರ ಕೈಗೊಳ್ಳಲಾರರು ಎನ್ನುವುದು ಅವರಿಗೆ ಮೊದಲು ಖಾತ್ರಿಯಾಗಬೇಕು.
ಇಲ್ಲಿ ಪ್ರಮುಖ ಪ್ರಶ್ನೆ ಎಂದರೆ, ಕಾಶ್ಮೀರಿಗಳು ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸಿಕೊಳ್ಳಬೇಕು ಎಂದು ಶೇಕ್ ಅಬ್ದುಲ್ಲಾ ಹೇಗೆ ಬಯಸುತ್ತಾರೆ ಎನ್ನುವುದು. ಜನಮತದಿಂದ ಅಲ್ಲ ಎನ್ನುವುದು ನನಗೆ ಖಚಿತವಿದೆ. ಭಾರತ ಸರಕಾರದ ಜತೆ ಮಾಡಿಕೊಂಡ ಒಪ್ಪಂದದ ಹಿನ್ನೆಲೆಯಲ್ಲಿ ಶೇಕ್ 1967ರ ಚುನಾವಣೆಯಲ್ಲಿ ಹೋರಾಡಬಲ್ಲರು. ದೇಶದ ಒಳಗೆಯೇ ಸ್ವಾಯತ್ತತೆಯನ್ನು ಕಾಶ್ಮೀರಿಗಳು ಬಯಸುತ್ತಾರೆಯೇ? ಭಾರತ ಹಾಗೂ ಪಾಕಿಸ್ತಾನಕ್ಕೆ ಕಾಶ್ಮೀರ ಯುದ್ಧಭೂಮಿಯಾಗುವುದನ್ನು ತಪ್ಪಿಸಲು ಅದೊಂದೇ ಮಾರ್ಗ ಎಂದು ಶೇಕ್ ಮುಕ್ತವಾಗಿ ಜನರಿಗೆ ಹೇಳುವುದರಿಂದ ಹಾಗೆ ಮಾಡಲು ಸಾಧ್ಯವಿದೆ.
ಶೇಕ್ ಅಬ್ದುಲ್ಲಾ ಅವರು ಭಾರತದೊಳಗಿದ್ದುಕೊಂಡೇ ಸ್ವಾಯತ್ತ ಕಾಶ್ಮೀರವನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಯಾವ ಆಧಾರದಲ್ಲಿ ಹೇಳುತ್ತೀರಿ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ನನ್ನ ಉತ್ತರ ಇದು:
ಇತ್ತೀಚಿನ ದಿನಗಳಲ್ಲಿ ಕಾಶ್ಮೀರವನ್ನು ಪಾಕಿಸ್ತಾನದಲ್ಲಿ ವಿಲೀನಗೊಳಿಸುವ ಪ್ರಸ್ತಾವಕ್ಕೆ ಶೇಕ್ ಸಾಹಿಬ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಶ್ಮೀರವನ್ನು ಸ್ವತಂತ್ರಗೊಳಿಸಲು ಅವರು ಪ್ರಯತ್ನಗಳನ್ನು ನಡೆಸಿದ್ದರು ಎನ್ನುವುದು ನಿರ್ವಿವಾದ. ಆದರೆ, ಪಾಕಿಸ್ತಾನದ ಜತೆಗಿನ ಕಳೆದ ಯುದ್ಧದ ಬಳಿಕ ಭಾರತ, ಯಾವುದೇ ರೀತಿಯಲ್ಲಿ ಕಾಶ್ಮೀರವನ್ನು ವಿಭಜಿಸುವ ಮೂಲಕ ಕಂಡುಹಿಡಿಯಬಹುದಾದ ಕಾಶ್ಮೀರ ಪರಿಹಾರವನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವ ವಾಸ್ತವ ಅವರ ಅರಿವಿಗೆ ಬಂದಿದೆ ಎಂಬ ನಂಬಿಕೆ ನನ್ನದು. ಅಥವಾ ಕಾಶ್ಮೀರವನ್ನು ಕಬಳಿಸುವ ಪಾಕಿಸ್ತಾನದ ಹಸಿವು ಹಾಗೂ ಈ ಪ್ರದೇಶದ ಶಕ್ತಿಯಾಗಿ ಬೆಳೆಯಲು ಚೀನಾ ನಡೆಸಿದ ಹುನ್ನಾರದಿಂದ, ಯಾವುದೇ ಪುಟ್ಟ ಸ್ವತಂತ್ರ ಪ್ರದೇಶ ಅಸ್ತಿತ್ವ ಉಳಿಸಿಕೊಳ್ಳುವ ಸಾಧ್ಯತೆ ಇಲ್ಲ ಎನ್ನುವುದು ಅವರಿಗೆ ಮನವರಿಕೆಯಾಗಿರುತ್ತದೆ. ಶೇಕ್ ಸಾಹಿಬ್ ಅವರು ನಾರಾಯಣನ್ ಹಾಗೂ ರಾಧಾಕೃಷ್ಣನ್ ಅವರ ಜತೆ ಮಾತನಾಡುತ್ತಾ, ಇತಿಹಾಸ ಮರುಕಳಿಸದಿದ್ದರೆ, ಭಾರತದ ಒಳಗೆ ಇದ್ದುಕೊಂಡೇ ಸಂಪೂರ್ಣ ಸ್ವಾಯತ್ತತೆಯನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ ಎನ್ನುವುದನ್ನು ನಿಮಗೆ ಹೇಳಬಯಸುತ್ತೇನೆ. ಅಂದರೆ ಕ್ರಮೇಣ ಸ್ವಾಯತ್ತತೆಗೆ ತಡೆ ಒಡ್ಡಿ ಕೇಂದ್ರ ಸರಕಾರ ಕ್ರಮೇಣ ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು ಎನ್ನುವುದು ಅವರ ಸ್ಪಷ್ಟ ನಿಲುವು. ಈ ಬಗ್ಗೆ ಯೋಚಿಸಲು, ನಾವು ಕ್ರಮೇಣ ಜನರನ್ನು ನಾವು ಸಜ್ಜುಗೊಳಿಸಬೇಕು.
ಕೇಂದ್ರ ಕನಿಷ್ಠಪಕ್ಷ ಅವರನ್ನು ಭ್ರಾಂತಿಗೊಳಿಸುತ್ತಿಲ್ಲ ಎನ್ನುವುದನ್ನು ನಂಬುವಂತೆ ಮಾಡಬೇಕು. ಅದರ ಭೌಗೋಳಿಕ ಸ್ಥಿತಿ ಹಿನ್ನೆಲೆಯಲ್ಲಿ ಪಾಕಿಸ್ತಾನ ಎಂದೂ ಆ ಪ್ರದೇಶ ಶಾಂತಿಯುತವಾಗಿ ಇರಲು ಅವಕಾಶ ನೀಡದು. ಚೀನಾ ಈ ಪ್ರಕ್ಷುಬ್ಧ ನೀತಿಯಲ್ಲಿ ಗಾಳ ಹಾಕಲು ಬಕಪಕ್ಷಿಯಂತೆ ಕಾಯುತ್ತಿದೆ ಎನ್ನುವುದನ್ನು ಮನವರಿಕೆ ಮಾಡಬೇಕು. ಬಾಹ್ಯಶಕ್ತಿಗಳು ಇಲ್ಲಿ ಕುತಂತ್ರ ನಡೆಸುವವರು, ತಮ್ಮ ತಂತ್ರಗಾರಿಕೆಗೆ ಕಾಶ್ಮೀರ ನೆಲ ಪೂರಕ ಎಂದು ಭಾವಿಸಬಾರದು. ಇದಕ್ಕೆ ಕಾಶ್ಮೀರದ ಬಹುಸಂಖ್ಯಾತ ಮಂದಿಗೆ ಸಮಾಧಾನವಾಗುವಂತೆ ವಿಷಯ ಇತ್ಯರ್ಥಪಡಿಸಬೇಕು. ಹೀಗೆ ಮಾಡುವುದರಿಂದ ಅಂತಾರಾಷ್ಟ್ರೀಯವಾಗಿಯೂ ಭಾರತದ ಘನತೆ ಹೆಚ್ಚುತ್ತದೆ. ಯಾವ ವೈಚಾರಿಕ ಸರಕಾರ ಕೂಡಾ ನಮ್ಮತ್ತ ಬೆಟ್ಟು ಮಾಡುವಂತಿಲ್ಲ.
ಪಾಕಿಸ್ತಾನವನ್ನು ಹೊರಗಿಟ್ಟು, ಶೇಕ್ ಭಾರತದ ಜತೆ ಒಪ್ಪಂದ ಮಾಡಿಕೊಳ್ಳುತ್ತಾರೆಯೇ ಎಂಬ ಇನ್ನೊಂದು ಪ್ರಶ್ನೆಯನ್ನೂ ಕೇಳಬಹುದು. ಖಂಡಿತವಾಗಿಯೂ. ಅವರು ಇಬ್ಬರು ಸರ್ವೋದಯ ಸ್ನೇಹಿತರ ಜತೆ ಮಾತನಾಡುತ್ತಾ, ಭಾರತದ ಜತೆ ದ್ವಿಪಕ್ಷೀಯ ಮಾತುಕತೆ ಮೊದಲ ಹಂತ ಎಂದು ಸ್ಪಷ್ಟಪಡಿಸಿದ್ದಾರೆ. ಅಂದರೆ ಪಾಕಿಸ್ತಾನವನ್ನು ಆ ಬಳಿಕವಷ್ಟೇ ಪರಿಗಣಿಸಲಾಗುತ್ತದೆ ಎನ್ನುವುದು ಸ್ಪಷ್ಟ. ಭಾರತದ ಜತೆಗಿನ ಒಪ್ಪಂದಕ್ಕೆ ಪಾಕಿಸ್ತಾನದ ಒಪ್ಪಿಗೆ ಪಡೆಯುವ ಶೇಕ್ ಅವರ ಯೋಚನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಬದಲು, ನಾವೇ ಮುಂದಡಿ ಇಟ್ಟು, ಶೇಕ್ ಭಾರತದ ಜತೆ ಹೊಂದಿರುವ ಸದಭಿಪ್ರಾಯವನ್ನು ಕಾರ್ಯಸಾಧು ಎನಿಸುವ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ಇಂಥ ಸುದೀರ್ಘ ಪತ್ರದಿಂದ ನಿಮ್ಮನ್ನು ಘಾಸಿಗೊಳಿಸಿದ್ದರೆ ಕ್ಷಮೆ ಇರಲಿ. ಆದರೆ ನನ್ನ ಅಭಿಪ್ರಾಯಗಳನ್ನು ನಿಮ್ಮ ಜತೆ ಹಾಗೂ ಸಹೋದ್ಯೋಗಿಗಳ ಜತೆ ಹಂಚಿಕೊಳ್ಳುವುದು ರಾಷ್ಟ್ರಕ್ಕಾಗಿ ನನ್ನ ಕರ್ತವ್ಯ ಎಂಬ ಭಾವನೆ ನನ್ನದು.
ವಂದನೆಗಳು









