ಜಲ ಸಮಾಧಿಯಾಗಿದ್ದ 11 ಮೃತದೇಹ ಪತ್ತೆ
ತುಂಗಾಭದ್ರಾ ನದಿಯಲ್ಲಿ ತೆಪ್ಪ ದುರಂತ
ಶಿವಮೊಗ್ಗ, ಸೆ.8: ತಾಲೂಕಿನ ಹಾಡೋನಹಳ್ಳಿ ಗ್ರಾಮದ ತುಂಗಾಭದ್ರಾ ನದಿಯಲ್ಲಿ ಬುಧವಾರ ಗಣಪತಿ ವಿಸರ್ಜನೆ ವೇಳೆ ತೆಪ್ಪ ಮಗುಚಿ ನೀರು ಪಾಲಾಗಿದ್ದವರ ಮೃತದೇಹಗಳ ಶೋಧ ಕಾರ್ಯಾಚರಣೆ ಗುರುವಾರ ಬೆಳಗ್ಗಿನಿಂದ ಆರಂಭವಾಗಿದೆ. ಮಧ್ಯಾಹ್ನ 3 ಗಂಟೆಯವರೆಗೂ ನದಿಯಿಂದ ನಾಲ್ವರ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಇನ್ನೊಂದು ಶವ ಪತ್ತೆಯಾಗಬೇಕಾಗಿದೆ. ಘಟನೆಯಲ್ಲಿ ಒಟ್ಟಾರೆ 12 ಮಂದಿ ನೀರುಪಾಲಾಗಿದ್ದರು. ಬುಧವಾರ ಸಂಜೆಯವರೆಗೂ ಏಳು ಜನರ ಶವಗಳು ಪತ್ತೆಯಾಗಿದ್ದವು. ಕತ್ತಲಾದ ಕಾರಣದಿಂದ ಶೋಧ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿತ್ತು. ಇದರಿಂದ ಐವರ ಶವ ಪತ್ತೆಯಾಗಿರಲಿಲ್ಲ. ಗುರುವಾರ ಬೆಳಗ್ಗಿನಿಂದ ಮುಳುಗು ತಜ್ಞರು ಶೋಧ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಶವವೊಂದು ನೀರಿನ ಮೇಲೆ ತೇಲುತ್ತಿತ್ತು. ಉಳಿದಂತೆ ಒಂದೊಂದಾಗಿ ಮೂರು ಶವಗಳನ್ನು ಪತ್ತೆ ಹಚ್ಚಿ ನೀರಿನಿಂದ ಹೊರ ತರುವಲ್ಲಿ ಯಶಸ್ವಿಯಾದರು.
ಕಾರವಾರದ ತಂಡ: ಹರಿಹರದಿಂದ ಆಗಮಿಸಿದ್ದ ಅಹ್ಮದ್ ಖಾನ್ ನೇತೃತ್ವದ ಮುಳುಗು ತಜ್ಞರ ತಂಡವು ಬುಧವಾರ ಶವ ಪತ್ತೆ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿತ್ತು. ಈ ತಂಡ ಗುರುವಾರ ಕಾರವಾರದಿಂದ ಆಗಮಿಸಿದ ನೌಕಾದಳದ ಮುಳುಗು ತಜ್ಞರ ತಂಡದ ಜೊತೆಗೆ ಶವಗಳ ಶೋಧ ಕಾರ್ಯ ಆರಂಭಿಸಿತು. ಇದರಿಂದ ಕೆಲವೇ ಗಂಟೆಗಳಲ್ಲಿ ಮೂರು ಶವಗಳನ್ನು ನೀರಿನಿಂದ ಹೊರ ತೆಗೆಯಲು ಸಾಧ್ಯವಾಯಿತು.
ಮೃತರ ವಿವರ: ಗುರುವಾರ ಇಂಜಿನಿಯರಿಂಗ್ ವಿದ್ಯಾರ್ಥಿ ಶಂಕರ್ (21), ಕೃಷಿಕರಾದ ಚಂದ್ರಪ್ಪ (50), ಯುವಕ ಗಣೇಶ್ (22), ಐಟಿಐ ವಿದ್ಯಾರ್ಥಿ ನಯನ (21) ಎಂಬವರ ಶವಗಳು ಪತ್ತೆಯಾಗಿವೆ. ಸಾಗರ (26) ಎಂಬ ಯುವಕನ ಶವ ಮಧ್ಯಾಹ್ನ 3 ಗಂಟೆಯವರೆಗೂ ಪತ್ತೆಯಾಗಿರಲಿಲ್ಲ. ಮುಳುಗು ತಜ್ಞರು ಶೋಧ ಕಾರ್ಯಾಚರಣೆ ಬಿರುಸುಗೊಳಿಸಿದ್ದರು. ಉಳಿದಂತೆ ಬುಧವಾರ ಸಿ.ಮಂಜುನಾಥ್ (35), ಪಿ.ಎಚ್.ಗಣೇಶ್ (22), ವೀರೇಶ್ (22), ಜೀವನ್ (21), ರಮೇಶ್ (20), ಶಿವಕುಮಾರ್ (18) ಹಾಗೂ ವೀರಭದ್ರಪ್ಪ(20) ಎಂಬವರ ಶವಗಳು ಪತ್ತೆಯಾಗಿದ್ದವು. ದುರ್ಘಟನೆಯಲ್ಲಿ ಮೃತರಾದ ವೀರೇಶ್ (22) ಮತ್ತು ಜೀವನ್ (20) ಸಹೋದರರಾಗಿದ್ದಾರೆ. ಶೇಖರಪ್ಪ ಎಂಬವರ ಪುತ್ರರಾಗಿದ್ದಾರೆ. ಹಿರಿಯ ಮಗ ವೀರೇಶ್ ಮೆಸ್ಕಾಂನಲ್ಲಿ ಗುತ್ತಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರೆ, ಜೀವನ್ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದರು. ಬದುಕುಳಿದವರು: ತೆಪ್ಪ ಮಗುಚಿದ ವೇಳೆ ಹಲವರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದರು. ತೆಪ್ಪದ ಮಾಲಕ ರಫಿ, ಸಂತೋಷ್, ದಿನೇಶ್, ಮೈಲಾರಪ್ಪ, ಶರತ್, ಚನ್ನಪ್ಪಸ್ವಾಮಿ, ಮನು, ಪರಶುರಾಮ್, ಗಂಗಾಧರಪ್ಪ ಮತ್ತಿತರರು ಬದುಕುಳಿದವರಾಗಿದ್ದಾರೆ.
ಗ್ರಾಮದಲ್ಲಿಯೇ ಮರಣೋತ್ತರ ಪರೀಕ್ಷೆ ಗ್ರಾಮದ ಈಶ್ವರ ದೇವಾಲಯದ ಸ್ಮಶಾನದ ಆವರಣದಲ್ಲಿಯೇ ಎಲ್ಲ ಶವಗಳ ಮರಣೋತ್ತರ ಪರೀಕ್ಷೆ ನಡೆಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಶವಗಳ ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಅವರವರ ಮನೆಗೆ ಸಾಗಿಸಿ ಕುಟುಂಬ ಸದಸ್ಯರ ಅಂತಿಮ ದರ್ಶನ ಹಾಗೂ ಧಾರ್ಮಿಕ ವಿಧಿವಿಧಾನ ನೆರವೇರಿಸಲು ಅವಕಾಶ ಕಲ್ಪಿಸಲಾಗಿತ್ತು. ತದನಂತರ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗ್ರಾಮದ ಮಾರಿ ದೇವಾಲಯದ ಆವರಣದಲ್ಲಿ 11 ಶವಗಳನ್ನು ಇಡಲಾಗಿತ್ತು. ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸಾವಿರಾರು ಜನರು ಪಾರ್ಥಿವ ಶರೀರಗಳ ಅಂತಿಮ ದರ್ಶನ ಪಡೆದರು. ನೂಕುನುಗ್ಗಲಿಗೆ ಆಸ್ಪದವಾಗದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿತ್ತು. ತದನಂತರ ಶವಗಳನ್ನು ಆ್ಯಂಬುಲೆನ್ಸ್ ಮೂಲಕ ಸ್ಮಶಾನಕ್ಕೆ ತರಲಾಯಿತು.
ಜನಪ್ರತಿನಿಧಿಗಳು, ಅಧಿಕಾರಿಗಳ ಭೇಟಿ ಹಾಡೋನಹಳ್ಳಿ ಗ್ರಾಮಕ್ಕೆ ಬುಧವಾರದಿಂದ ಜನಪ್ರತಿನಿಧಿಗಳ, ಅಧಿಕಾರಿಗಳ ದಂಡೇ ಆಗಮಿಸುತ್ತಿದೆ. ಗುರುವಾರ ಕೂಡ ಗ್ರಾಮದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಹಿರಿಯ-ಕಿರಿಯ ಅಧಿಕಾರಿಗಳು ಬೀಡುಬಿಟ್ಟಿದ್ದರು. ಹಾಗೆಯೇ ಜನಪ್ರತಿನಿಧಿಗಳು ಕೂಡ ಗ್ರಾಮಕ್ಕೆ ಭೇಟಿ ನೀಡಿ ಮೃತರ ಬಂಧು-ಬಳಗದವರಿಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದರು.
ಬುಧವಾರ ಲೋಕಸಭಾ ಸದಸ್ಯ ಬಿ.ಎಸ್. ಯಡಿಯೂರಪ್ಪ, ಶಾಸಕ ಬಿ.ವೈ.ರಾಘವೇಂದ್ರ ಮೊದಲಾದವರು ಗ್ರಾಮಕ್ಕೆ ಭೇಟಿ ನೀಡಿದ್ದರು. ಗುರುವಾರ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯನಾಯ್ಕಾ ಅವರು ಗ್ರಾಮಕ್ಕೆ ಭೇಟಿ ನೀಡಿದ್ದರು. ಸಂಜೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಗ್ರಾಮಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.







