‘ಪೂರ್ವಾಪರ ಚಿಂತಿಸಿಯೇ ನೀರು ಬಿಡಲಾಗಿದೆ’
.ರಾಜ್ಯಕ್ಕೆ ನೀರಿನ ಸಮಸ್ಯೆ ತಲೆದೋರದಂತೆ ಸೂಕ್ತ ಕ್ರಮ: ಸಿಎಂ

ಬೆಂಗಳೂರು, ಸೆ.8: ರಾಜ್ಯಕ್ಕೆ ಅಗತ್ಯವಿರುವ ನೀರನ್ನು ಗಮನದಲ್ಲಿರಿಸಿಕೊಂಡು, ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಅನಿವಾರ್ಯವಾಗಿ ತಮಿಳುನಾಡಿಗೆ ನೀರನ್ನು ಬಿಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ನೇತೃತ್ವದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ತೊಂದರೆಯಾಗದಂತೆ ಪೂರ್ವಾಪರಗಳನ್ನು ಚಿಂತಿಸಿಯೇ ತಮಿಳುನಾಡಿಗೆ ನೀರು ಬಿಡಲಾಗಿದೆ ಎಂದು ತಿಳಿಸಿದರು.
ರಾಜ್ಯಕ್ಕೆ ಮುಂದಿನ ಮಳೆಗಾಲದವರೆಗೂ ಕುಡಿಯುವ ನೀರಿಗೆ 28ಟಿಎಂಸಿ ಹಾಗೂ ನೀರಾವರಿಗೆ 47ಟಿಎಂಸಿ ಬೇಕಾಗುತ್ತದೆ. ಇಷ್ಟು ನೀರನ್ನು ರಾಜ್ಯದ ಜನತೆಗೆ ನೀಡಲು ರಾಜ್ಯ ಸರಕಾರ ಸಿದ್ಧವಿದೆ. ಈ ಬಗ್ಗೆ ರೈತರು ಸೇರಿದಂತೆ ರಾಜ್ಯದ ಜನತೆಗೆ ಆತಂಕ ಬೇಡವೆಂದು ಅವರು ಮನವಿ ಮಾಡಿದರು.
ರಾಜ್ಯಪರ ವಕೀಲ ಫಾಲಿ ನಾರಿಮನ್ ಸಮರ್ಥವಾಗಿ ಸುಪ್ರೀಂ ಕೋರ್ಟ್ ಎದುರು ವಾದ ಮಂಡಿಸುತ್ತಿದ್ದಾರೆ. ಈ ಮೊದಲು ತಮಿಳುನಾಡಿಗೆ 380ಟಿಎಂಸಿ ನೀರು ಬಿಡಬೇಕಾಗಿತ್ತು. ಆದರೆ. ಈಗ 192 ಟಿಎಂಸಿ ಮಾತ್ರ ಬಿಡುವ ಹಂತಕ್ಕೆ ಮುಟ್ಟಿದ್ದೇವೆ. ಇದಕ್ಕೆ ಹಿರಿಯ ವಕೀಲ ನಾರಿಮನ್‌ರ ಪರಿಶ್ರಮ ಸಾಕಷ್ಟಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾವೇರಿ ವಿಷಯವನ್ನು ಮುಂದಿಟ್ಟು ರಾಜಕಾರಣ ಮಾಡಲು ಹೊರಟಿದ್ದಾರೆ. 2012ರಲ್ಲಿ ಬಿಜೆಪಿ ಸರಕಾರವಿದ್ದಾಗ ಪ್ರತಿದಿನ 10ಸಾವಿರ ಕ್ಯೂಸೆಕ್ಸ್ ನೀರನ್ನು ಬಿಟ್ಟಿದ್ದರು. ಈಗ ಸುಪ್ರೀಂ ಕೋರ್ಟ್‌ನ ಆದೇಶದನ್ವಯ ನೀರು ಬಿಟ್ಟಿರುವುದಕ್ಕೆ ಕಾಂಗ್ರೆಸ್ ಸರಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಇದು ಕೇವಲ ಸ್ವಾರ್ಥ ರಾಜಕಾರಣವಷ್ಟೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ





