‘ಬ್ರಿಕ್ಸ್’ ರಾಷ್ಟ್ರಗಳ ಸಹಭಾಗಿತ್ವದಲ್ಲಿ ಸೆ.10ರಿಂದ ‘ಆರೋಗ್ಯ ಎಕ್ಸ್ ಪೋ’
ಬೆಂಗಳೂರು, ಸೆ.8: ಕೇಂದ್ರ ಸರಕಾರದ ಆಯುಷ್ ಮಂತ್ರಾಲಯ ಹಾಗೂ ‘ಬ್ರಿಕ್ಸ್’ ರಾಷ್ಟ್ರಗಳ ಸಹಭಾಗಿತ್ವದಲ್ಲಿ ಸೆ.10ರಿಂದ 13ರ ವರೆಗೆ ನಾಲ್ಕು ದಿನಗಳ ಕಾಲ ಬೆಂಗಳೂರು ನಗರದಲ್ಲಿ ‘ಆರೋಗ್ಯ ಎಕ್ಸ್ ಪೋ-2016’ನ್ನು ಏರ್ಪಡಿಸಲಾಗಿದೆ.
ಎಕ್ಸ್ ಪೋನಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ(ಬ್ರಿಕ್ಸ್) ರಾಷ್ಟ್ರಗಳ ಸುಮಾರು 150 ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಭಾರತೀಯ ಪ್ರಾಚೀನ ವೈದ್ಯ ಪದ್ಧತಿಯ ಬಗ್ಗೆ ಎರಡು ದಿನಗಳ ಕಾಲ ವಿಚಾರ ವಿನಿಮಯ ಇಲ್ಲಿನ ಅರಮನೆ ರಸ್ತೆಯಲ್ಲಿರುವ ಶಾಂಗ್ರಿಲಾ ಹೊಟೇಲ್‌ನಲ್ಲಿ ನಡೆಯಲಿದೆ.
ಸೆ.10ರಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೇಂದ್ರದ ಆಯುಷ್ ಮಂತ್ರಿ ಶ್ರೀಪಾದ ಯುಸ್ಕೋ ನಾಯ್ಕೋ ಉದ್ಘಾಟನೆ ನೆರವೇರಿಸಲಿದ್ದು, ಆರೋಗ್ಯ ಸಚಿವ ಕೆ.ಆರ್. ರಮೇಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಹಾಗೂ ಸಂಸದ ಪಿ.ಸಿ.ಮೋಹನ್, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ನಾಲ್ಕು ದಿನಗಳ ಆರೋಗ್ಯ ಎಕ್ಸ್ ಪೋ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಲಿದ್ದು, 300ಕ್ಕೂ ಹೆಚ್ಚು ಪ್ರತಿಷ್ಟಿತ ಔಷಧ ತಯಾರಿಕಾ ಕಂಪೆನಿಗಳು ಭಾಗವಹಿಸಲಿವೆ. ವಿವಿಧ ವೈದ್ಯ ಪದ್ಧತಿಯ ಬಗ್ಗೆ ಪ್ರದರ್ಶನ, ಉಚಿತ ವೈದ್ಯಕೀಯ ತಪಾಸಣೆ ಶಿಬಿರಗಳು ಬೆಳಗ್ಗೆ 11ರಿಂದ ರಾತ್ರಿ 8ಗಂಟೆಯ ವರೆಗೆ ನಡೆಯಲಿದೆ.





