ಬಂಟ್ವಾಳ: ‘ದಲಿತ ಅಸ್ಮಿತ್ವ ಮತ್ತು ಜಾತ್ಯತೀತ ರಾಜಕಾರಣ’ ಸಂವಾದ

ಬಂಟ್ವಾಳ, ಸೆ.8: ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆಯ ತತ್ವಾಶಯದ ತಳಹದಿಯಲ್ಲಿ ರೂಪುಗೊಂಡ ಬಾರತದ ಸಂವಿಧಾನವು ದೇಶದ ಜಾತ್ಯತೀತ ರಾಜಕಾರಣವನ್ನು ಬಲಪಡಿಸಿ ಪ್ರಜಾಪ್ರುತ್ವವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್, ಜವಹರ್‌ಲಾಲ್ ನೆಹರೂ ಕಮ್ಮಟದ ಆಶ್ರಯದಲ್ಲಿ ಮಂಗಳೂರಿನ ಜೆ.ವಿ.ಸನ್ಸ್ ಸಂಕೀರ್ಣದಲ್ಲಿ ಇತ್ತೀಚೆಗೆ ನಡೆದ ‘ದಲಿತ ಅಸ್ಮಿತ್ವ ಮತ್ತು ಜಾತ್ಯತೀತ ರಾಜಕಾರಣ’ ವಿಷಯದಲ್ಲಿ ಯುವ ಜನತೆಯೊಂದಿಗಿನ ಸಂವಾದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಭಾರತ 7 ದಶಕದಲ್ಲಿ ಇಷ್ಟೊಂದು ಪ್ರಗತಿ ಕಾಣಲು ಡಾ. ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣವಾಗಿದೆ. ದಲಿತ ವಿರೋಧಿ ನೀತಿಯು ಸಂವಿಧಾನದ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸಿದೆ ಎಂದು ಹೇಳಿದ ಅವರು, ಸಂವಿಧಾನ ವಿರೋಧಿ ಶಕ್ತಿಗಳು ವಿಜೃಂಭಿಸುತ್ತಿರುವ ಈ ಕಾಲದಲ್ಲಿ ಯುವಜನತೆ ಜಾಗೃತರಾಗಿ ಸಂವಿಧಾನವನ್ನು ಉಳಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಅವರು ಕರೆ ನೀಡಿದರು.
ಒಂದು ರಾಷ್ಟ್ರದ ಸಂಪತ್ತನ್ನು ಹಾಗೂ ಪ್ರಗತಿಯನ್ನು ಅಳೆದು ನೋಡಬೇಕಾದರೆ ಅಲ್ಲಿಯ ಸರಕಾರವು ಆ ದೇಶದ ಮಕ್ಕಳು, ಮಹಿಳೆಯರು, ಅಂಗವಿಕಲರು ಮತ್ತು ವೃದ್ಧರನ್ನು ಯಾವ ರೀತಿ ನೋಡಿಕೊಳ್ಳುತ್ತಿದೆ ಎಂಬುದರಲ್ಲಿ ತಿಳಿಯುತ್ತದೆ. ದೇಶದಲ್ಲಿ ದಲಿತರು ಪಡಬಾರದ ಕಷ್ಟ, ನಷ್ಟವನ್ನು ಪಡುತ್ತಿದ್ದು ದಲಿತರು ಸಮಾಜದಲ್ಲಿ ಗುರುತಿಸುವುದಕ್ಕಾಗಿ ನಡೆಸುತ್ತಿರುವ ಹೋರಾಟದಲ್ಲಿ ನ್ಯಾಯವಿದೆ ಎಂದು ಹೇಳಿದರು.
ಸಂವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ವಹಿಸಿದ್ದರು. ಎಐಸಿಸಿ ಸದಸ್ಯ ಪಿ.ವಿ.ಮೋಹನ್ ಉಪಸ್ಥಿತರಿದ್ದರು. ಕಮ್ಮಟ ಸಂಚಾಲಕ ಲುಕ್ಮಾನ್ ಬಂಟ್ವಾಳ ಸ್ವಾಗತಿಸಿದರು. ಸಹ ಸಂಚಾಲಕ ಪ್ರೇಮಾ ಬಲ್ಲಾಳ್‌ಬಾಗ್ ವಂದಿಸಿದರು.







