ಪೊಲೀಸ್ ನೇಮಕಾತಿ: ವಯೋಮಿತಿ ಎರಡು ವರ್ಷ ಹೆಚ್ಚಳಕ್ಕೆ ಸಂಪುಟ ನಿರ್ಧಾರ

ಬೆಂಗಳೂರು, ಸೆ.8: ರಾಜ್ಯ ಪೊಲೀಸ್ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರಕಾರವು, ತಮಿಳುನಾಡು ಹಾಗೂ ಮಹಾರಾಷ್ಟ್ರಗಳ ಮಾದರಿಯಲ್ಲಿ ಪೊಲೀಸ್ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸಲು ನಿರ್ಧರಿಸಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 28 ವರ್ಷದಿಂದ 30 ವರ್ಷಕ್ಕೆ, ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳಿಗೆ 26 ರಿಂದ 28 ವರ್ಷಕ್ಕೆ ವಯೋಮಿತಿ ಹೆಚ್ಚಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಕೃಷಿ ಇಲಾಖೆಯಲ್ಲಿ ಖಾಲಿಯಿರುವ 66 ಸಹಾಯಕ ಕೃಷಿ ನಿರ್ದೇಶಕರು, 373 ಕೃಷಿ ಅಧಿಕಾರಿಗಳ ಹುದ್ದೆಗಳಿಗೆ ಹಾಗೂ 169 ಸಹಾಯಕ ಕೃಷಿ ಅಧಿಕಾರಿಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಬೀದರ್ ಹಾಗೂ ಗದಗ ಜಿಲ್ಲೆಗಳಲ್ಲಿ ಹೆಸರು ಕಾಳಿಗೆ 5,225 ರೂ.ಬೆಂಬಲ ಬೆಲೆ ನೀಡಿ ಮುಂದಿನ 45 ದಿನಗಳವರೆಗೆ ನಾಫ್ಟೆಕ್ ಸಂಸ್ಥೆಯ ಮೂಲಕ ಖರೀದಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಅಲ್ಲದೆ, ರಾಜ್ಯ ನೀರಾವರಿ ನಿಗಮಕ್ಕೆ 2016-17ನೆ ಸಾಲಿನಲ್ಲಿ 1,100 ಕೋಟಿ ರೂ.ಬ್ಯಾಂಕ್ ಸಾಲ ಪಡೆಯಲು ಸರಕಾರದ ಖಾತರಿ ನೀಡಲು ನಿರ್ಧರಿಸಲಾಗಿದೆ ಎಂದು ಜಯಚಂದ್ರ ಹೇಳಿದರು.
ಸಚಿವ ಸಂಪುಟ ಪುನಾರಚನೆಯಿಂದಾಗಿ ಹಲವು ಸಚಿವರ ಖಾತೆಗಳು ಬದಲಾವಣೆಯಾಗಿವೆ. ಆದುದರಿಂದ, ವಿವಿಧ ವಿಷಯಗಳಿಗೆ ಸಂಬಂಧಿಸಿದ 22 ಸಚಿವ ಸಂಪುಟ ಉಪ ಸಮಿತಿಗಳನ್ನು ಪುನಾರಚಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.







