ಭಾರತೀಯರು ವಾಸಿಸುವ ಸ್ಥಳಗಳಿಗೆ ಹೋಗುವಾಗ ಎಚ್ಚರಿಕೆ
ಪ್ರಯಾಣಿಕರಿಗೆ ಏರ್ ಚೀನಾ ಬೋಧನೆ!
ಬೀಜಿಂಗ್, ಸೆ. 8: ಚೀನಾದ ವಿಮಾನಯಾನ ಸಂಸ್ಥೆ ‘ಏರ್ ಚೀನಾ’ ತನ್ನ ಪ್ರಯಾಣಿಕರಿಗೆ ನೀಡುವ ‘ಜನಾಂಗೀಯವಾದಿ’ ಎಚ್ಚರಿಕೆಯನ್ನು ಚೀನಾದ ಪತ್ರಕರ್ತರೊಬ್ಬರು ಬಹಿರಂಗಪಡಿಸಿದ್ದಾರೆ.
‘‘ಪ್ರವಾಸಕ್ಕೆ ಲಂಡನ್ ಸಾಮಾನ್ಯವಾಗಿ ಸುರಕ್ಷಿತ ಸ್ಥಳ. ಆದಾಗ್ಯೂ, ಮುಖ್ಯವಾಗಿ ಭಾರತೀಯರು, ಪಾಕಿಸ್ತಾನೀಯರು ಮತ್ತು ಕಪ್ಪು ವರ್ಣೀಯರು ವಾಸಿಸುವ ಸ್ಥಳಗಳಿಗೆ ಹೋಗುವಾಗ ಮುಂಜಾಗರೂಕತೆಗಳನ್ನು ತೆಗೆದುಕೊಳ್ಳುವುದು ಅಗತ್ಯ’’ ಎಂದು ಏರ್ ಚೀನಾ ವಿಮಾನದೊಳಗೆ ಸರಬರಾಜು ಮಾಡುವ ಮ್ಯಾಗಝಿನ್‌ನಲ್ಲಿ ಎಚ್ಚರಿಸುತ್ತದೆ. ಪತ್ರಕರ್ತ ಹೇಝ್ ಫಾನ್ ‘ಎಚ್ಚರಿಕೆ’ಯ ಚಿತ್ರವೊಂದನ್ನು ಲಂಡನ್ ಮೇಯರ್ ಸಾದಿಕ್ ಖಾನ್‌ರಿಗೆ ಟ್ವೀಟ್ ಮಾಡಿದ್ದಾರೆ. ‘‘ರಾತ್ರಿ ಒಬ್ಬಂಟಿಯಾಗಿ ಹೊರ ಹೋಗದಂತೆ ನಾವು ಪ್ರವಾಸಿಗರಿಗೆ ಸಲಹೆ ನೀಡುತ್ತೇವೆ. ಹಾಗೂ ಮಹಿಳೆಯರು ಹೊರ ಹೋಗುವಾಗ ಅವರೊಂದಿಗೆ ಇನ್ನೊಬ್ಬ ವ್ಯಕ್ತಿ ಇರಬೇಕು’’ ಎಂದು ಮ್ಯಾಗಝಿನ್ ಹೇಳುತ್ತದೆ.
ಬ್ರಿಟಿಷ್ ಸಂಸದನ ಖಂಡನೆ
ಲಂಡನ್, ಸೆ. 8: ಚೀನಾ ಏರ್‌ಲೈನ್ಸ್‌ನ ‘ಜನಾಂಗೀಯವಾದಿ ಪ್ರಯಾಣ ಸಲಹೆ’ಯನ್ನು ಲಂಡನ್ ಸಂಸದ ವೀರೇಂದ್ರ ಶರ್ಮ ಖಂಡಿಸಿದ್ದಾರೆ. ‘‘ಇಂಥ ಸಾರಾಸಗಟು ಸುಳ್ಳು ಹಾಗೂ ಜನಾಂಗೀಯವಾದಿ ಹೇಳಿಕೆಗಳನ್ನು ಬರೆಯುವುದು ಸ್ವೀಕಾರಾರ್ಹ ಎಂದು ನಂಬುವ ಜನರು ಈಗಿನ ಕಾಲದಲ್ಲೂ ಇದ್ದಾರೆ ಎಂದು ತಿಳಿದು ನನಗೆ ಆಘಾತವಾಗಿದೆ’’ ಎಂದು ಅವರು ಆನ್‌ಲೈನ್ ಹೇಳಿಕೆಯೊಂದರಲ್ಲಿ ಹೇಳಿದ್ದಾರೆ. ‘‘ಈ ವಿಷಯವನ್ನು ಚೀನಾ ರಾಯಭಾರಿಯೊಂದಿಗೆ ಪ್ರಸ್ತಾಪಿಸಿದ್ದೇನೆ ಹಾಗೂ ಏರ್ ಚೀನಾ ತನ್ನ ಕೃತ್ಯಕ್ಕೆ ಕ್ಷಮೆ ಕೋರುವಂತೆ ಹಾಗೂ ಆ ಮ್ಯಾಗಝಿನನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ನೋಡಿಕೊಳ್ಳುವಂತೆ ಅವರನ್ನು ವಿನಂತಿಸಿದ್ದೇನೆ’’ ಎಂದು ಶರ್ಮ ತಿಳಿಸಿದ್ದಾರೆ.
ಮ್ಯಾಗಝಿನ್ ಹಿಂದಕ್ಕೆ ಪಡೆದ ಏರ್ ಚೀನಾ
ಬೀಜಿಂಗ್, ಸೆ. 8: ಜನಾಂಗೀಯವಾದಿ ಎಚ್ಚರಿಕೆಯನ್ನು ಹೊಂದಿರುವ ತನ್ನ ವಿಮಾನದೊಳಗಿನ ಮ್ಯಾಗಝಿನನ್ನು ಹಿಂದಕ್ಕೆ ಪಡೆದಿರುವುದಾಗಿ ಏರ್ ಚೀನಾ ಹೇಳಿದೆ.
ಮ್ಯಾಗಝಿನ್ ‘‘ಉಚಿತವಲ್ಲದ’’ ಭಾಷೆಯನ್ನು ಒಳಗೊಂಡಿತ್ತು ಹಾಗೂ ಅದು ವಿಮಾನಯಾನ ಕಂಪೆನಿಯ ನಿಲುವನ್ನು ವ್ಯಕ್ತಪಡಿಸುವುದಿಲ್ಲ ಎಂದು ಏರ್‌ಲೈನ್ ಇಂದು ‘ಅಸೋಸಿಯೇಟಡ್ ಪ್ರೆಸ್’ಗೆ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ. ಮ್ಯಾಗಝಿನ್‌ನ ಪ್ರಕಾಶಕರು ಏರ್ ಚೀನಾಕ್ಕೆ ಕ್ಷಮೆ ಕೋರಿ ಕಳುಹಿಸಿರುವ ಪತ್ರದ ಪ್ರತಿಯೊಂದನ್ನೂ ಅದು ಕಳುಹಿಸಿದೆ.







