ಪ್ರತಿಭಟನೆ ಶಾಂತವಾಗಿರಲಿ - ಕಾನೂನು ಕೈಗೆತ್ತಿಕೊಂಡರೆ ಕಠಿಣಕ್ರಮ: ಸಿಎಂ

ಬೆಂಗಳೂರು, ಸೆ.8: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ರಾಜ್ಯಬಂದ್ ಶಾಂತಿಯುತವಾಗಿರಲಿ. ಯಾವುದೇ ಕಾರಣಕ್ಕೂ ಸರಕಾರ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆಯುಂಟು ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಗೃಹ ಇಲಾ ಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯಬಂದ್‌ಗೆ ನಾವು ವಿರೋಧ ಮಾಡುತ್ತಿಲ್ಲ. ಅದನ್ನು ತಡೆಯುವ ಪ್ರಯತ್ನವನ್ನು ಮಾಡುತ್ತಿಲ್ಲ. ಆದರೆ, ಬಂದ್ ಶಾಂತಿಯುತವಾಗಿ ನಡೆಯಬೇಕು ಎಂದರು.
ಜನರು ಸ್ವಯಂ ಪ್ರೇರಣೆಯಿಂದ ಬಂದ್ ಆಚರಿಸಲಿ, ಅವರ ಮೇಲೆ ಯಾರೂ ಬಲವಂತದ ಬಂದ್ ಹೇರುವಂತಿಲ್ಲ. ಸಾರ್ವಜನಿಕ ಹಾಗೂ ಸರಕಾರಿ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡಿ, ಕಾನೂನು ಕೈಗೆತ್ತಿಕೊಳ್ಳಲು ಮುಂದಾಗುವ ದುಷ್ಟ ಶಕ್ತಿಗಳ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಈ ಹಿಂದೆ ನಡೆದಿರುವ ಬಂದ್‌ಗಳ ವೇಳೆ ಕೆಲವು ಸಮಾಜ ಘಾತುಕ ಶಕ್ತಿಗಳು ಸಂದರ್ಭಗಳನ್ನು ದುರುಪಯೋಗ ಪಡಿಸಿಕೊಂಡಿರುವುದು ಕಂಡು ಬಂದಿದೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ರಾಜ್ಯಾದ್ಯಂತ ಭದ್ರತೆಗಾಗಿ ನಮ್ಮ ಕೆಎಸ್‌ಆರ್‌ಪಿ ತುಕಡಿಗಳೊಂದಿಗೆ ಕೇಂದ್ರದ 10 ಪಡೆಗಳು, ಕೇರಳ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳಿಂದಲೂ ಹೆಚ್ಚುವರಿ ಪಡೆಗಳು ಬರುತ್ತಿವೆ. ಬೆಂಗಳೂರಿನಲ್ಲಿ 25 ಸಾವಿರ ಜನ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ. ಮಂಡ್ಯ, ಮೈಸೂರು, ಹಾಸನ, ತುಮಕೂರು, ಹುಬ್ಬಳ್ಳಿ-ಧಾರವಾಡ ಮುಂತಾದ ಕಡೆಗಳಲ್ಲೂ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಸೂಕ್ಷ್ಮಪ್ರದೇಶಗಳಲ್ಲಿ ಹೆಚ್ಚುವರಿ ಬಂದೋಬಸ್ತ್ ಏರ್ಪಡಿಸಲಾಗುವುದು. ಪೊಲೀಸ್ ವಾಹನಗಳಿಗೆ ನಿಖರವಾದ ಜವಾಬ್ದಾರಿ ನೀಡಲಾಗಿದೆ. ಮೆರವಣಿಗೆ ಮಾಡಲು ತಕರಾರಿಲ್ಲ. ಆದರೆ, ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ಮಾಡುವುದು, ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿ ಮಾಡಲು ಮುಂದಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಕಾವೇರಿ ನದಿ ನೀರಿನ ಕುರಿತು ಭಾವನಾತ್ಮಕ ಆಕ್ರೋಶವಿರುತ್ತದೆ. ನಮ್ಮ ಸಿಟ್ಟು ಶಾಂತಿಯುತವಾಗಿ ಪ್ರದರ್ಶನಗೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಂತಹ ಪ್ರಚೋದನಾತ್ಮಕ ಹೇಳಿಕೆಗಳು, ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಶಾಂತಿಯುತ ಬಂದ್‌ಗೆ ಮಾಧ್ಯಮಗಳು ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದರು. ಶಾಲಾ-ಕಾಲೇಜುಗಳಿಗೆ ರಜೆ: ರಾಜ್ಯಾದ್ಯಂತ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ. ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಸರಕಾರಿ ಕಚೇರಿಗಳಲ್ಲೂ ಹಾಜರಾತಿಯ ಕೊರತೆ ಇರುತ್ತದೆ. ಆದರೆ, ಆ್ಯಂಬುಲೆನ್ಸ್ ಸೇರಿದಂತೆ ತುರ್ತು ಸೇವೆಗಳಿಗೆ ಯಾವುದೇ ರೀತಿಯ ಅಡ್ಡಿ ಇರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಗಣೇಶ ವಿಸರ್ಜನೆಯನ್ನು ಎಚ್ಚರಿಕೆಯಿಂದ ಮಾಡಬೇಕು. ಶಿವಮೊಗ್ಗದಲ್ಲಿ ತುಂಗಭದ್ರಾ ನದಿಯಲ್ಲಿ ಗಣೇಶ ವಿಸರ್ಜನೆ ಮಾಡಲು ಹೋಗಿ 12 ಜನ ನೀರು ಪಾಲಾಗಿದ್ದಾರೆ. ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಸ್ಥಳೀಯ ಸಂಸ್ಥೆಗಳು ನಿಗದಿ ಪಡಿಸಿರುವಂತಹ ಸ್ಥಳಗಳಲ್ಲೇ ಗಣೇಶ ಮೂರ್ತಿಯ ವಿಸರ್ಜನೆ ಮಾಡುವಂತೆ ಅವರು ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ನಗರಾಭಿವೃದ್ಧಿ ಸಚಿವ ಆರ್.ರೋಷನ್‌ಬೇಗ್, ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಅರವಿಂದ ಜಾಧವ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್, ನಗರ ಪೊಲೀಸ್ ಆಯುಕ್ತ ಮೇಘರಿಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಬೆಂಗಳೂರು, ಸೆ.8: ರಾಜ್ಯಾದ್ಯಂತ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ. ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಸರಕಾರಿ ಕಚೇರಿಗಳಲ್ಲೂ ಹಾಜರಾತಿಯ ಕೊರತೆ ಇರುತ್ತದೆ. ಆದರೆ, ಆ್ಯಂಬುಲೆನ್ಸ್ ಸೇರಿದಂತೆ ತುರ್ತು ಸೇವೆಗಳಿಗೆ ಯಾವುದೇ ರೀತಿಯ ಅಡ್ಡಿ ಇರುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.







