ಕೇಂದ್ರದ ಅಪಾಯಕಾರಿ ನಡೆ

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ಹೊರಟಿರುವ ದಿಕ್ಕನ್ನು ನೋಡಿದರೆ ಭಾರತದ ಜನತಂತ್ರಕ್ಕೆ ಅಪಾಯದ ದಿನಗಳು ಕಾದಿವೆ ಎಂದೆನಿಸುತ್ತದೆ. ಒಂದೆಡೆ ಕಾರ್ಪೊರೇಟ್ ಬಂಡವಾಳಶಾಹಿಗೆ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ಮುಕ್ತ ಅವಕಾಶ ನೀಡಲಾಗಿದೆ. ಇನ್ನೊಂದೆಡೆ ಸಂಘಪರಿವಾರದ ಮನುವಾದಿ ಹಿಂದೂರಾಷ್ಟ್ರ ಕಾರ್ಯಸೂಚಿಯನ್ನು ದೇಶದ ಮೇಲೆ ಹೇರಲು ಹುನ್ನಾರಗಳು ನಡೆದಿವೆ. ಒಂದೆಡೆ ಗೋರಕ್ಷಕರೆಂಬ ನರಭಕ್ಷಕರು ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರನ್ನು ಕೊಂದು ಹಾಕುತ್ತಿದ್ದಾರೆ. ಇನ್ನೊಂದೆಡೆ ಪ್ರಧಾನಿ ಸ್ಥಾನದಲ್ಲಿ ಕುಳಿತ ವ್ಯಕ್ತಿ ಗಟ್ಟಿಯಾಗಿ ಮಾತನಾಡುವುದನ್ನು ಬಿಟ್ಟು ‘ಬೇಕಾದರೆ ನನ್ನನ್ನು ಹೊಡೆಯಿರಿ’ ಎಂದು ಅಸಹಾಯಕರಂತೆ ಮಾತನಾಡುತ್ತಿದ್ದಾರೆ. ಆದರೆ, ಆರೆಸ್ಸೆಸ್ ಕಾರ್ಯಸೂಚಿಯ ಜಾರಿ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ.
ಇದೀಗ ಸರಕಾರ ಇನ್ನೊಂದು ವಿವಾದದಲ್ಲಿ ಸಿಲುಕಿಕೊಂಡಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರರಾದ ಬಿಪನ್ ಚಂದ್ರ ಅವರು ಬರೆದ ‘ಭಾರತದ ಸ್ವಾತಂತ್ರ ಹೋರಾಟದ ಇತಿಹಾಸ’ ಎಂಬ ಪುಸ್ತಕವನ್ನು ಮಾರಾಟ ಮಾಡದಿರಲು ದಿಲ್ಲಿಯ ವಿಶ್ವವಿದ್ಯಾನಿಲಯ ತೀರ್ಮಾನಿಸಿದ ಬೆನ್ನಲ್ಲೇ ಈ ಪುಸ್ತಕದ ಹಿಂದಿಯ ಆವೃತ್ತಿಯನ್ನು ಮರು ಮುದ್ರಿಸದಿರಲು ನ್ಯಾಶನಲ್ ಬುಕ್ ಟ್ರಸ್ಟ್ ತೀರ್ಮಾನಿಸಿದೆ. ಪುಸ್ತಕಕ್ಕೆ ಬೇಡಿಕೆ ಇದ್ದರೂ ಮರು ಮುದ್ರಿಸಲು ತೀರ್ಮಾನಿಸದೆ ಇರುವುದು ಖಂಡನೀಯವಾಗಿದೆ. ಬಿಪನ್ ಚಂದ್ರ ಅವರು ಬರೆದ ಪುಸ್ತಕದ ಬಗ್ಗೆ ಸಂಘಪರಿವಾರ ಮುಂಚಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದೆ. ತಾನು ಒಪ್ಪಿಕೊಂಡಿರುವ ಹಿಂದೂ ರಾಷ್ಟ್ರ ಸಿದ್ಧಾಂತಕ್ಕೆ ಭಿನ್ನವಾಗಿರುವ ಇತಿಹಾಸ ವಿಶ್ಲೇಷಣೆಯನ್ನು ಆರೆಸ್ಸೆಸ್ ಸಹಿಸುವುದಿಲ್ಲ. ಅಂತಲೇ ಅದು ಕೇಂದ್ರ ಸರಕಾರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲ ಇಂತಹ ಇತಿಹಾಸಕಾರರನ್ನು ಗುರಿಯಾಗಿರಿಸಿಕೊಂಡು ದಾಳಿ ಮಾಡುತ್ತಾ ಬಂದಿದೆ. ಹಿಂದೆ ವಾಜಪೇಯಿ ಸರಕಾರ ಅಸ್ತಿತ್ವದಲ್ಲಿದ್ದಾಗ ಇದೇ ಬಿಪನ್ ಚಂದ್ರ ಅವರು ಬರೆದ ಪುಸ್ತಕಗಳನ್ನು ಶಾಲಾ ಪಠ್ಯಪುಸ್ತಕಗಳನ್ನಾಗಿ ಮಾಡಬಾರದೆಂದು ರದ್ದುಗೊಳಿಸಿತ್ತು. ಆಗಲೂ ಈ ಬಗ್ಗೆ ದೇಶದ ಚಿಂತಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆರೆಸ್ಸೆಸ್‌ನ ಸುಳ್ಳು ಇತಿಹಾಸ ವಿಶ್ಲೇಷಣೆಯನ್ನು ದೇಶದ ಜನರಲ್ಲಿ ದ್ವೇಷದ ವಿಷಬೀಜ ಬಿತ್ತುವ ಸುಳ್ಳು ಸೃಷ್ಟಿಗಳನ್ನು ಬಿಪನ್‌ಚಂದ್ರ ಬಯಲಿಗೆಳೆಯುತ್ತಾ ಬಂದಿದ್ದಾರೆ.
ಇತಿಹಾಸ ಅಂದರೆ ರಾಜ ರಾಣಿಯರ ಕಥೆಯಲ್ಲ. ಅವು ಬರೀ ಧರ್ಮದ ನಡುವಿನ ಸಂಘರ್ಷವಲ್ಲ. ಜನತೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ನಡೆಸಿದ ಹೋರಾಟ ಎಂಬುದನ್ನು ಬಿಪನ್‌ಚಂದ್ರ ಅವರು ಪರಿಣಾಮಕಾರಿಯಾಗಿ ವಿಶ್ಲೇಷಿಸಿದ್ದಾರೆ. ಅದರಲ್ಲೂ ಭಾರತದ ಸ್ವಾತಂತ್ರ ಹೋರಾಟದ ಕುರಿತು ಅವರು ಬರೆದ ಸಂಶೋಧನಾ ಗ್ರಂಥದಲ್ಲಿ ಈ ದೇಶದ ಹಿಂದೂ ಮುಸ್ಲಿಮರು ಸೇರಿದಂತೆ ಎಲ್ಲ ಸಮುದಾಯಗಳು ಒಂದಾಗಿ ನಡೆಸಿದ ಹೋರಾಟವನ್ನು ಅವರು ವಿಶ್ಲೇಷಿಸಿದ್ದಾರೆ. ಬಿಪನ್ ಚಂದ್ರ ಮಾತ್ರವಲ್ಲದೆ ಕೆ.ಎಂ. ಪಣಿಕ್ಕರ್, ರೊಮಿಲಾ ಥಾಪರ್ ಅವರಂತಹ ಇತಿಹಾಸಕಾರರು ಇಂತಹ ಪುಸ್ತಕಗಳನ್ನು ಬರೆದಿದ್ದಾರೆ. ಈ ಪುಸ್ತಕಗಳನ್ನು ಮರು ಮುದ್ರಿಸದಿರಲು ಹಾಗೂ ಈಗಾಗಲೇ ಶಾಲಾ ಪಠ್ಯವಾಗಿರುವ ಪುಸ್ತಕಗಳನ್ನು ಕೈಬಿಡಲು ಸರಕಾರ ತೀರ್ಮಾನಿಸಿದ್ದು ಸರಿಯಲ್ಲ. ಈ ದೇಶದ ಸರಕಾರ ಸಂವಿಧಾನದ ಬೆಳಕಿನಲ್ಲಿ ಸಾಗಬೇಕಾಗಿದೆ. ಚುನಾಯಿತ ಸಂಸತ್ತು ತೋರಿಸಿದ ದಿಕ್ಕಿನಲ್ಲಿ ಮುನ್ನಡೆಯಬೇಕಾಗಿದೆ. ಆದರೆ ಮೋದಿ ಸರಕಾರವನ್ನು ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರವೊಂದು ನಿಯಂತ್ರಿಸುತ್ತಿರುವುದು ಈಗಾಗಲೇ ವ್ಯಾಪಕ ಖಂಡನೆಗೆ ಗುರಿಯಾಗಿದೆ.
ಈ ಸಂವಿಧಾನೇತರ ಅಧಿಕಾರ ಕೇಂದ್ರವೇ ಬಿಪನ್‌ಚಂದ್ರ ಪುಸ್ತಕ ಮರು ಮುದ್ರಣ ಕೈಬಿಡಲು ಕಾರಣವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಸಂಪೂರ್ಣವಾಗಿ ಕೈವಶಪಡಿಸಿಕೊಂಡು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಆರೆಸ್ಸೆಸ್ ಚಿಂತಿಸುತ್ತಿದೆ. ಅಂತಲೇ ಭಾರತದ ಇತಿಹಾಸ ಅನುಸಂಧಾನ ಪರಿಷತ್ತಿಗೆ ಸಂಘದ ಸ್ವಯಂ ಸೇವಕನೆಂಬ ಖ್ಯಾತಿ ಪಡೆದ ವ್ಯಕ್ತಿಯನ್ನು ನೇಮಕಮಾಡಲಾಗಿದೆ. ಕೇಂದ್ರದ ಮಾನವ ಸಂಪನ್ಮೂಲ ಸಚಿವ ಖಾತೆಯನ್ನು ನಿಗೂಢ ಅಧಿಕಾರ ಕೇಂದ್ರ ನಿಯಂತ್ರಿಸುತ್ತಿದೆ. ಆದರೆ ದೇಶದ ಜನ ಅದನ್ನು ಒಪ್ಪಿಕೊಳ್ಳುತ್ತಿಲ್ಲ. ಪುಣೆಯ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ಕೈಹಾಕಿ ಸಂಘದ ಸ್ವಯಂ ಸೇವಕನೊಬ್ಬನನ್ನು ಅದರ ನಿರ್ದೇಶಕನನ್ನಾಗಿ ಮಾಡಲಾಯಿತು. ಆಗ ಅಲ್ಲಿನ ವಿದ್ಯಾರ್ಥಿಗಳು ರೊಚ್ಚಿಗೆದ್ದು ಒಂದು ವರ್ಷ ಕಾಲ ಹೋರಾಟ ನಡೆಸಿದರು. ಕೊನೆಗೆ ಆ ವ್ಯಕ್ತಿಯನ್ನು ವರ್ಗಾವಣೆ ಮಾಡುವುದು ಮೋದಿ ಸರಕಾರಕ್ಕೆ ಅನಿವಾರ್ಯವಾಯಿತು. ಅದೇ ರೀತಿ ಚಲನಚಿತ್ರ ಸೆನ್ಸಾರ್ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಸಂಘಪರಿವಾರದ ವ್ಯಕ್ತಿಯನ್ನು ನೇಮಕ ಮಾಡಿ ಸರಕಾರ ಮುಖಭಂಗ ಅನುಭವಿಸಿತು.
ಕೇಂದ್ರ ಮಾನವ ಸಂಪನ್ಮೂಲ ಖಾತೆಯನ್ನು ಬಳಸಿಕೊಂಡು ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ದಲಿತ ವಿದ್ಯಾರ್ಥಿಗಳ ವಿರುದ್ಧ ಎಬಿವಿಪಿ ನಡೆಸಿದ ಹುನ್ನಾರಕ್ಕೆ ಸರಕಾರ ಅವಕಾಶ ನೀಡಿತು. ಕೊನೆಗೆ ಪ್ರತಿಭಾವಂತ ದಲಿತ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶ ನಿರ್ಮಾಣವಾಯಿತು. ಅದೇ ರೀತಿ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಹಸ್ತಕ್ಷೇಪ ನಡೆಸಿ ಅಲ್ಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಅವರನ್ನು ದೇಶದ್ರೋಹಿಗಳೆಂದು ಬಿಂಬಿಸಿ ಬಂಧನಕ್ಕೆ ಗುರಿಪಡಿಸಲಾಯಿತು. ಇದರ ವಿರುದ್ಧ ಈ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಐತಿಹಾಸಿಕ ಹೋರಾಟವನ್ನು ನಡೆಸಿದರು. ಕೊನೆಗೆ ಕೇಂದ್ರ ಸರಕಾರ ಮಾನವ ಸಂಪನ್ಮೂಲಸಚಿವ ಖಾತೆಯಿಂದ ಸ್ಮತಿ ಇರಾನಿ ಅವರನ್ನು ತೆಗೆದುಹಾಕುವ ಪರಿಸ್ಥಿತಿ ನಿರ್ಮಾಣವಾಯಿತು.
ಈ ರೀತಿ ಸಂಘಪರಿವಾರದ ಅಜೆಂಡಾವನ್ನು ಹೇರಲು ಹೋಗಿ ನಿರಂತರವಾಗಿ ಮುಖಭಂಗ ಅನುಭವಿಸಿದ ಸರಕಾರ ಈಗ ಬಿಪನ್ ಚಂದ್ರ ಅವರ ಇತಿಹಾಸ ಸಂಶೋಧನಾ ಗ್ರಂಥ ಮರುಮುದ್ರಣಕ್ಕೆ ಅಡ್ಡಿ ಉಂಟುಮಾಡಿರುವುದು ಖಂಡನೀಯವಾಗಿದೆ. ಯಾವುದೇ ಕಾರಣಕ್ಕೂ ಸರಕಾರ ಇಂತಹ ಅಪಾಯಕಾರಿ ತೀರ್ಮಾನ ಕೈಗೊಳ್ಳಬಾರದು. ಬೇಡಿಕೆ ಇರುವ ಪುಸ್ತಕಗಳ ಮರುಮುದ್ರಣಕ್ಕೆ ಅವಕಾಶ ನೀಡಬೇಕು.







