ಡಯೆಟ್ ಹೆರಿಟೇಜ್ ಮ್ಯೂಸಿಯಂಗೆ ಕಾಯಕಲ್ಪ
ನವೀಕರಣಗೊಳ್ಳುತ್ತಿದೆ ಕಾಸರಗೋಡಿನ ಪ್ರಾಚ್ಯ ವಸ್ತು ಸಂಗ್ರಹಾಲಯ

ಕಾಸರಗೋಡು, ಸೆ.10: ಪ್ರಾಚ್ಯವಸ್ತುಗಳನ್ನು ಸಂಗ್ರಹಿಸಿ ಜೋಪಾನವಾಗಿಡುವ ನಿಟ್ಟಿನಲ್ಲಿ ಕಾಸರಗೋಡು ಡಯೆಟ್‌ನಲ್ಲಿರುವ ಹೆರಿಟೇಜ್ ವಸ್ತು ಸಂಗ್ರಾಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುಂದಾಗಿದೆ.
ಈಗ ಕಾರ್ಯಾಚರಿಸುತ್ತಿರುವ ಪುರಾತನ ವಸ್ತು ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಿ ವಿಸ್ತರಿಸಲು ಯೋಜನೆ ಹಾಕಲಾಗಿದ್ದು, ಇದಕ್ಕೆ ಜಿಲ್ಲಾ ಪಂಚಾಯತ್ ಅನುಮೋದನೆ ನೀಡಿದೆ.
ಇದಕ್ಕಾಗಿ ಸುಮಾರು 30 ಲಕ್ಷ ರೂ. ಒದಗಿಸಲು ಆಡಳಿತನುಮತಿ ನೀಡಲಾಗಿದೆ. ಜಿಲ್ಲಾ ಪಂಚಾಯತ್‌ನ 2015-16ನೆ ಸಾಲಿನ ಯೋಜನೆಯಲ್ಲಿ ಜಿಲ್ಲಾ ಪ್ರಾಚ್ಯ ವಸ್ತು ಸಂಗ್ರಹಾಲಯದ ಅಭಿವೃದ್ಧಿಗೆ ಅನುದಾನ ಮೀಸಲಿರಿಸಲಾಗಿದೆ.
ಐದು ವರ್ಷಗಳ ಹಿಂದೆ ಡಯಟ್‌ನಲ್ಲಿ ಹೆರಿಟೇಜ್ ಮ್ಯೂಸಿಯಂ ಕಾರ್ಯಾರಂಭಗೊಂಡಿತ್ತು. ಶಿಕ್ಷಕರು, ಶಿಕ್ಷಕ ವಿದ್ಯಾರ್ಥಿಗಳು, ಸಾರ್ವಜನಿಕರ ಸಹಕಾರದೊಂದಿಗೆ ಇದನ್ನು ಆರಂಭಿಸಲಾಗಿತ್ತು. ಜಿಲ್ಲೆಯ ಹಲವೆಡೆಗಳಿಂದ ಹಳೆಯ ತರವಾಡುಗಳಿಂದ ಅಪೂರ್ವ ವಸ್ತುಗಳನ್ನು ಸಂಗ್ರಹಿಸಲಾಗಿತ್ತು.
ಪಳ್ಳಿಕೆರೆ ಆಲಕ್ಕೋಡು ದಿವಂಗತ ಪುಷ್ಪಾಗತನ್‌ಎಂಬವರ ಪುರಾತನ ವಸ್ತುಗಳ ಅಪಾರ ಸಂಗ್ರಹವನ್ನು ಅವರು ಕುಟುಂಬಸ್ಥರು ಈ ವಸ್ತು ಸಂಗ್ರಹಾಲಯಕ್ಕೆ ಒಪ್ಪಿಸಿದ್ದರು. ಡಯೆಟ್ನ ಹಳೆ ಹಾಸ್ಟೆಲ್ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಈ ವಸ್ತು ಸಂಗ್ರಹಾಲಯ ಆರಂಭಿಸಲಾಗಿತ್ತು. ಅಲ್ಲದೇ ಈ ಕಟ್ಟಡ ಕೂಡಾ ಸುರಕ್ಷಿತವಾಗಿಲ್ಲ. ಇದೀಗ ಜಿಲ್ಲಾ ಪಂಚಾಯತ್ ನೆರವಿನಿಂದ ವಸ್ತು ಸಂಗ್ರಹಾಲಯಕ್ಕೆ ಹೊಸ ಜೀವಕಳೆ ಮೂಡುವ ನಿರೀಕ್ಷೆಯಿದೆ. ಜಿಲ್ಲೆಯ ಇತಿಹಾಸ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಮ್ಯೂಸಿಯಂ ತಲೆ ಎತ್ತಲಿದೆ. ಹತ್ತಕ್ಕೂ ಅಧಿಕ ಕೋಣೆಗಳನ್ನೊಳಗೊಂಡ ಮ್ಯೂಸಿಯಂ ತಲೆಯೆತ್ತಲಿದೆ. ಜಿಲ್ಲಾ ಹೆರಿಟೇಜ್‌ಮ್ಯೂಸಿಯಂ ಆಗಿ ಅಭಿವೃದ್ಧಿಗೊಳ್ಳುವುದರೊಂದಿಗೆ ವಿದ್ಯಾರ್ಥಿಗಳು, ಶಿಕ್ಷಕರು, ಸಂಶೋಧಕರಿಗೆ ಸಾಕಷ್ಟು ಅನುಕೂಲಕರವಾಗಲಿದೆ.
ಹಳೆ ಕಾಲದ ಕೃಷಿ ಸಲಕರಣ್ನೆಗಳು, ವಿವಿಧ ದೀಪಗಳು, ಅಳತೆ ಪಾತ್ರೆಗಳು, ಆಟಿಕೆ ಸಾಮಗ್ರಿಗಳು, ಹಳೆ ಕಾಲದ ಕರಕುಶಲ ಸಾಮಗ್ರಿಗಳು, ಅಲಂಕಾರಿಕಾ ವಸ್ತುಗಳು, ಗಡಿಯಾರ ಸೇರಿದಂತೆ ಹಲವು ಪ್ರಾಚ್ಯ ವಸ್ತುಗಳ ಸಂಗ್ರಹವೇ ಇಲ್ಲಿದೆ. ಇದೀಗ ಮ್ಯೂಸಿಯಂ ನವೀಕರಣಕ್ಕೆ ಎಲ್ಲ ವಲಯದ ಸಹಕಾರವನ್ನು ಪಡೆಯಲಾಗುವುದು. ಈ ನಿಟ್ಟಿನಲ್ಲಿ ಡಯಟ್ ಪ್ರಾಂಶುಪಾಲ ಪಿ.ವಿ.ಕೃಷ್ಣಕುಮಾರ್, ಉಪನ್ಯಾಸಕ ಪಿ.ಭಾಸ್ಕರನ್ ನೇತೃತ್ವ ನೀಡುತ್ತಿದ್ದಾರೆ.







